ಚಿತ್ರದುರ್ಗ: ಗಾದ್ರಿ ಪಾಲನಾಯಕ ಸ್ವಾಮಿಯ ಸಾಲು ಸಾಲು ಎತ್ತಿನ ಗಾಡಿಗಳೊಂದಿಗೆ ಹಳ್ಳಿಯ ಸೊಬಗಿನಿಂದ ಕಂಗೊಳಿಸುವ ಮಿಂಚೇರಿ ಜಾತ್ರಾ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ.
ಚಿತ್ರದುರ್ಗ ತಾಲ್ಲೂಕಿನ ಬಚ್ಚಬೋರನಹಟ್ಟಿ ಗ್ರಾಮದ ಮ್ಯಾಸ ನಾಯಕ ಸಮುದಾಯದವರು ತಮ್ಮ ಆರಾಧ್ಯ ಧೈವ ಹಾಗೂ ಸಾಂಸ್ಕøತಿಕ ವೀರ ಎಂದೇ ಖ್ಯಾತಿ ಗಳಿಸಿರುವ ಗಾದ್ರಿ ಪಾಲನಾಯಕ ಸ್ವಾಮಿಯ ಹೆಸರಿನಲ್ಲಿ ಮಿಂಚೇರಿ ಯಾತ್ರೆಯ ಮಹೋತ್ಸವ ನಡೆಯಲಿದ್ದು, ಈ ಮಹೋತ್ಸವದಲ್ಲಿ ಎತ್ತಿನ ಗಾಡಿಗಳನ್ನು ಶೃಂಗಾರ ಮಾಡಿಕೊಂಡು ಸಿರಿಗೆರೆ ಸಮೀಪದ ಮಿಂಚೇರಿ ಗುಡ್ಡದ ಗಾದ್ರಿಪಾಲನಾಯಕನ ಸನ್ನಿಧಾನಕ್ಕೆ ನೂರಾರು ಎತ್ತಿನ ಗಾಡಿಗಳೊಂದಿಗೆ ಪಯಣ ಬೆಳೆಸಲಿದ್ದಾರೆ.
ಬುಡಕಟ್ಟು ಸಂಸ್ಕøತಿಯ ಆಚರಣೆಗಳಲ್ಲಿ ಒಂದಾಗಿರುವ ಗಾದ್ರಿಪಾಲನಾಯಕ ಸ್ವಾಮಿಯ ಮಿಂಚೇರಿ ಯಾತ್ರೆಯನ್ನು ಪ್ರತಿ ಐದು ವರ್ಷಗಳಿಗೊಮ್ಮೆ ಶತ ಶತಮಾನಗಳಿಂದಲೂ ಆಚರಿಸುತ್ತಾ ಬಂದಿದ್ದು, ಐದು ವರ್ಷಗಳ ಬಳಿಕ ಪುನಃ ಜಾತ್ರೆಗೆ ಸಿದ್ಧತೆ ನಡೆದಿದ್ದು, ಗ್ರಾಮದ ಜನರು ಅಂತಿಮ ಹಂತದ ಸಿದ್ಧತೆಯಲ್ಲಿ ತೊಡಗಿದ್ದಾರೆ.
ಆರು ದಿನಗಳ ಉತ್ಸವ: ಈ ಬಾರಿಯ ಮಿಂಚೆರಿ ಜಾತ್ರಾ ಮಹೋತ್ಸವ 2023ರ ಡಿಸೆಂಬರ್ 23 ರಿಂದ 28 ರವರೆಗೆ ನಡೆಯಲಿದೆ. ಈ ಮಿಂಚೇರಿ ಯಾತ್ರಾ ಮಹೋತ್ಸವದಲ್ಲಿ ವಿಶಿಷ್ಟ ಆಚರಣೆಯನ್ನು ಕಾಣಬಹುದಾಗಿದ್ದು, ಬುಡಕಟ್ಟು ಸಂಸ್ಕøತಿಯ ವೈಭವ ಮೇಳೈಸಲಿದೆ.
ಡಿಸೆಂಬರ್ 23ರಂದು ಶನಿವಾರ ಉದಯ ಕಾಲಕ್ಕೆ ದೇವರ ಮುತ್ತಯ್ಯಗಳ ಆಗಮನವಾದ ನಂತರ ಬೆಳಿಗ್ಗೆ 7ಕ್ಕೆ ದೇವರ ಮಜ್ಜನಬಾವಿಯಲ್ಲಿ ಗುರು-ಹಿರಿಯರೊಂದಿಗೆ ಗಂಗಾಪೂಜೆ ಹಾಗೂ ಬೆಳಿಗ್ಗೆ 11.30ಕ್ಕೆ ಮಿಂಚೇರಿ ಯಾತ್ರಾ ಮಹೋತ್ಸವ ಆರಂಭವಾಗಲಿದೆ. ದೇವರ ಮುತ್ತಯ್ಯಗಳೊಂದಿಗೆ ಊರಿನಿಂದ ನಿರ್ಗಮಿಸಿ ಅಲ್ಲಿಂದ ಕಕ್ಕಲು ಬೆಂಚಲ್ಲಿ ಪೂಜೆ ಸಲ್ಲಿಸಿ, ಯಾತ್ರೆ ಮುಂದುವರೆಯುವುದು. ಅಂದು ಸಂಜೆ 7ಕ್ಕೆ ಕ್ಯಾಸಾಪುರದ ಬಯಲಿನಲ್ಲಿ ಸ್ವಾಮಿಗೆ ಪೂಜೆ ನಂತರ ಬೀಡು ಬೀಡುವುದು. ನಂತರ ರಾತ್ರಿ ಭಜನೆ, ಕೋಲಾಟ, ಸೋಬಾನೆ, ಸಾಂಸ್ಕøತಿಕ ಕಾರ್ಯಕ್ರಮ ನಡೆಯುವುದು.
ಡಿಸೆಂಬರ್ 24ರಂದು ಬೆಳಿಗ್ಗೆ 7ಕ್ಕೆ ಸಕಲ ಸದ್ಭಕ್ತರಿಂದ ಸ್ವಾಮಿಯ ಪೂಜೆ ನಂತರ ಯಾತ್ರೆ ಮುಂದುವರೆಯುವುದು. ಮಧ್ಯಾಹ್ನ 12ಕ್ಕೆ ಸಿರಿಗೆರೆ ಡಿ.ಮದಕರಿಪುರ ವರತಿನಾಯಕನ ಕೆರೆಯ ದಂಡೆಯಲ್ಲಿ ವಿಶ್ರಾಂತಿ. ನಂತರ ಕೆರೆಯ ದಂಡೆಯಲ್ಲಿ ಪೂಜೆ ಮುಗಿಸಿಕೊಂಡು ಪಶುಪಾಲಕರಾದ ಗಾದ್ರಿಪಾಲನಾಯಕ ಸ್ವಾಮಿಯ ಸುಕ್ಷೇತ್ರ ಮಿಂಚೇರಿಗೆ ಪಯಣ. ಸಂಜೆ 5ಕ್ಕೆ ಸ್ವಾಮಿಯ ಮೀಸಲು ಹಾಲಿನ ಕಂಬಿಯ ಪೂಜೆ. ರಾತ್ರಿ ಗುರು-ಹಿರಿಯರ ಸಾಂಪ್ರದಾಯಿಕ ಪೂಜೆ ನಂತರ ಬೀಡು ಬಿಡಲಾಗುವುದು. ಮಧ್ಯರಾತ್ರಿ ಕಂಚವ್ವ ಕಾಮವ್ವರ ಚಿಲುಮೆ ಗಂಗಮ್ಮನ ಮಹಾಪೂಜೆ. ಕೋಲಾಟ, ಭಜನೆ, ಸೋಬಾನೆ ಹಾಗೂ ಇತರೆ ಕಾರ್ಯಕ್ರಮಗಳು ನಡೆಯುತ್ತವೆ.
ಡಿಸೆಂಬರ್ 25ರಂದು ಬೆಳಿಗ್ಗೆ 5ಕ್ಕೆ ಸ್ವಾಮಿಯ ಪೂರ್ವಿಕರ ವಿಧಿ-ವಿಧಾನಗಳೊಂದಿಗೆ ಹುಲಿರಾಯನ ಸಮಾಧಿಗೆ ಪೂಜೆ. ನಾಯಕನ ಸಮಾಧಿಗೆ ಪೂಜೆ ಹಾಗೂ ಮಣಿವು ಕಾರ್ಯಕ್ರಮ. ನಂತರ ಮಧ್ಯಾಹ್ನ 2ಕ್ಕೆ ಸ್ವಾಮಿಯ ಸನ್ನಿಧಿಯಲ್ಲಿ ಬಸವಂತರಿಗೆ ಹಾಗೂ ಚೌಕು ಮಣೆವು ಕಾರ್ಯಕ್ರಮ. ಸಂಜೆ 4ಕ್ಕೆ ಕಣಿವೆ ಮಾರಮ್ಮ, ಮಲಿಯಮ್ಮ ಹಾಗೂ ಕೊಲ್ಲಪುರದಮ್ಮನವರ ಗಂಗಾಪೂಜೆ. ಸಂಜೆ 7ಕ್ಕೆ ಸ್ವಾಮಿಗೆ ಪೂಜೆ ನಂತರ ಭಕ್ತಾಧಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ.
ಡಿಸೆಂಬರ್ 26ರಂದು ಬೆಳಿಗ್ಗೆ 7ಕ್ಕೆ ಸ್ವಾಮಿಯು ಜಂಗಮ ಸ್ವರೂಪಿಯಾಗಿ ಭಿಕ್ಷೆ ಸ್ವೀಕಾರ ಕಾರ್ಯಕ್ರಮ. ಬೆಳಿಗ್ಗೆ 11ಕ್ಕೆ ಸ್ವಾಮಿಯ ಸನ್ನಿಧಿಯಲ್ಲಿ ಪ್ರಸಾದ ದಾಸೋಹ. ಮಧ್ಯಾಹ್ನ 2ಕ್ಕೆ ಮಿಂಚೇರಿ ಸುಕ್ಷೇತ್ರದಿಂದ ನಿರ್ಗಮನ. ರಾತ್ರಿ 7ಕ್ಕೆ ಕಡ್ಲೇಗುದ್ದು ಬಳಿಯ ಸಿದ್ದರ ಗುಂಡಿಗೆ ಆಗಮನ. ನಂತರ ಸ್ವಾಮಿಗೆ ಪೂಜೆ ಸಲ್ಲಿಸಿ ಬೀಡು ಬಿಡುವುದು.
ಡಿಸೆಂಬರ್ 27ರಂದು ಬೆಳಿಗ್ಗೆ 7ಕ್ಕೆ ಸ್ವಾಮಿಗೆ ಪೂಜೆ ಸಲ್ಲಿಸಿ ಬೆಳಿಗ್ಗೆ 10ಕ್ಕೆ ಕ್ಯಾಸಾಪುರ ಹತ್ತಿರ ಜನಿಗಿಹಳ್ಳದ ದಂಡೆಯಲ್ಲಿ ವಿಶ್ರಾಂತಿ ಮತ್ತು ಸ್ವಾಮಿಯ ಸಂಪ್ರಾದಾಯದಂತೆ ಜನಿಗಿ ಹಳಕ್ಕೆ ಗಂಗಾಪೂಜೆ ನಡೆಯುತ್ತದೆ. ನಂತರ ಯಾತ್ರೆ ಮುಂದುವರೆಯಲಿದೆ. ಮಧ್ಯಾಹ್ನ 2ಕ್ಕೆ ಗಂಡುಮೆಟ್ಟಿದ ನಾಡು ಚಿತ್ರದುರ್ಗಕ್ಕೆ ಮಿಂಚೇರಿ ಮಹೋತ್ಸವದ ಮೆರವಣಿಗೆ ಆಗಮನ. ನಂತರ ರಾಜಾ ಬೀದಿಗಳಲ್ಲಿ ಸ್ವಾಮಿಯ ಮೆರವಣಿಗೆ ಆಗಮನ. ನಂತರ ರಾಜಾ ಬೀದಿಗಳಲ್ಲಿ ಸ್ವಾಮಿಯ ಮೆರವಣಿಗೆ, ಕೋಲಾಟ, ಭಜನೆ, ಉರುಮೆ, ಕುಣಿತ, ತಮಟೆ, ವಾದ್ಯಗಳೊಂದಿಗೆ ಕಹಳೆಯ ನಾದದೊಂದಿಗೆ ಜನಪದ ನೃತ್ಯಗಳೊಂದಿಗೆ ಭವ್ಯ ಮೆರವಣಿಗೆ ನಡೆಯಲಿದೆ. ಸಂಜೆ 7ಕ್ಕೆ ಸುಕ್ಷೇತ್ ಕಕ್ಕಲು ಬೆಂಚಿನಲ್ಲಿ ಬೀಡು ಬಿಡುವುದು.
ಡಿಸೆಂಬರ್ 28ರಂದು ಸಂಜೆ 7ಕ್ಕೆ ಸ್ವಾಮಿಯ ಗ್ರಾಮದ ಹೊಸ್ತಿಲು ಪೂಜೆಯೊಂದಿಗೆ ಸ್ವಸ್ಥಾನಕ್ಕೆ ಮರಳುವುದು. ಗುರು-ಹಿರಿಯರೊಂದಿಗೆ ದೇವರ ಮುತ್ತಯ್ಯಗಳ ಬೀಳ್ಕೊಡುಗೆ ನಡೆಯಲಿದೆ.
ಮಿಂಚೇರಿ ಮಹೋತ್ಸವ ಉದ್ಘಾಟನಾ ಹಾಗೂ ಮೆರವಣಿಗೆ ಕಾರ್ಯಕ್ರಮಕ್ಕೆ ಜನಪ್ರತಿನಿಧಿಗಳು, ಗಣ್ಯರು ಹಾಗೂ ಚಿತ್ರದುರ್ಗ ತಾಲ್ಲೂಕಿನ ಬಚ್ಚಬೋರನಹಟ್ಟಿ ಗ್ರಾಮ ಸೇರಿದಂತೆ ಜಿಲ್ಲೆಯ ವಿವಿಧೆಡೆಗಳಿಂದ ಭಕ್ತಾಧಿಗಳು ಭಾಗವಹಿಸಲಿದ್ದಾರೆ.
ಮಿಂಚೇರಿ ಜಾತ್ರೆ ಹಿನ್ನಲೆ : ಬುಡಕಟ್ಟು ಸಂಸ್ಕøತಿಯ ನಾಯಕ ಜನಾಂಗದ ನಾಯಕ ಎಂದೇ ಹೆಸರಾಗಿರುವ ಗಾದ್ರಿಪಾಲನಾಯಕ ಚಿತ್ರದುರ್ಗ ಜಿಲ್ಲೆಯ ಸಿರಿಗೆರೆ ಬಳಿಯ ಮದಕರಿಪುರ ಗ್ರಾಮದ ಬಳಿಯ ಕಾಡಿನಲ್ಲಿ ಗಾದ್ರಿಪಾಲನಾಯಕ ಗೋ ಸಂರಕ್ಷಕ. ಆತನಿಗೆ ಕಂಚವ್ವ, ಕಾಮವ್ವರೆಂಬ ಇಬ್ಬರು ಪತ್ನಿಯರು. ಅಡವಿಯಲ್ಲಿ ಪಶುಪಾಲನೆ ಸಂದರ್ಭದಲ್ಲಿ ಹುಲಿಯೊಂದಿಗೆ ಅನೋನ್ಯ ಒಪ್ಪಂದದಿಂದಾಗಿ ಹುಲಿಮರಿಗಳನ್ನು ಹಸು ಕರುಗಳ ರೊಪ್ಪದಲ್ಲಿಯೇ ಬಿಡಲಾಗಿತ್ತು. ಒಮ್ಮೆ ಗಾದ್ರಿಪಾಲನಾಯಕನ ಭಾವ ಮೈದುನರಾದ ಚಿತ್ತಯ್ಯ, ಕಾಟಯ್ಯ ರೊಪ್ಪಕ್ಕೆ ಬರುತ್ತಾರೆ. ಯಾರೂ ಕಾಣದಿದ್ದಾಗ ರೊಪ್ಪದಲ್ಲಿದ್ದ ಹುಲಿಮರಿಯನ್ನು ಕೊಲ್ಲುತ್ತಾರೆ. ಇದರಿಂದ ಗಾದ್ರಿಪಾಲನಾಯಕ ವಚನಭ್ರಷ್ಟನಾದೆನೆಂದು ದುಃಖಿಸುತ್ತಾನೆ. ಕೊನೆಗೆ ಹುಲಿಯೊಂದಿಗೆ ಕಾದಾಡಿ ಹುಲಿ ಮತ್ತು ಗಾದ್ರಿಪಾಲನಾಯಕ ಸಾವನ್ನಪ್ಪುತ್ತಾರೆ. ಹುಲಿ ಹಾಗೂ ಗಾದ್ರಿಪಾಲನಾಯಕ ಸಮಾಧಿಗಳು ಇಂದಿಗೂ ಮಿಂಚೇರಿ ಬೆಟ್ಟದಲ್ಲಿ ಇವೆ.
ಗಾದ್ರಿಪಾಲನಾಯಕನ ನೆಲವೀಡು ಮಿಂಚೇರಿ: ಮಿಂಚೇರಿ ಬೆಟ್ಟ-ಗುಡ್ಡಗಳಿಂದ ಕೂಡಿದ ಪ್ರದೇಶ ಮಾತ್ರವಲ್ಲದೇ ಧಾರ್ಮಿಕ ಕೇಂದ್ರವೂ ಹೌದು. ಮಿಂಚೇರಿ ಬೆಟ್ಟ ಮ್ಯಾಸ ನಾಯಕರ ಆರಾಧ್ಯ ದೈವ ಗಾದ್ರಿಪಾಲನಾಯಕನ ನೆಲವೀಡಾಗಿದೆ. ಇಲ್ಲಿಗೆ ಜಿಲ್ಲೆಯ ವಿವಿಧೆಡೆಗಳಿಂದ ಸಾವಿರಾರು ಭಕ್ತರು ಬಂದು ಪೂಜೆ ಸಲ್ಲಿಸುತ್ತಾರೆ. ಸಮೃದ್ಧ ಮಳೆ-ಬೆಳೆಗಾಗಿ ಪ್ರಾರ್ಥಿಸಲಾಗುತ್ತದೆ.
ಸಜ್ಜೆ ರೊಟ್ಟೆ, ಗಾರ್ಗೆ, ಕರಜೀಕಾಯಿ ಯಾತ್ರೆಯ ವಿಶೇಷ ಖಾದ್ಯ: ಸಜ್ಜೆ ರೊಟ್ಟೆ, ಗಾರ್ಗೆ, ಕರಜೀಕಾಯಿ ಮಿಂಚೇರಿ ಮಹೋತ್ಸವದ ವಿಶೇಷ ಖಾದ್ಯವಾಗಿದೆ. ಯಾತ್ರೆಗಾಗಿ ಖಾದ್ಯ ತಯಾರಿ ಸಿದ್ಧತೆ ಭರದಿಂದ ನಡೆಯುತ್ತಿದೆ.
ಯಾತ್ರೆ ಸಾಗುವ ಮಾರ್ಗ: ಚಿತ್ರದುರ್ಗ ತಾಲ್ಲೂಕಿನ ಬಚ್ಚಬೋರನಹಟ್ಟಿ ಗ್ರಾಮದಿಂದ ಆರಂಭವಾದ ಮಿಂಚೇರಿ ಮಹೋತ್ಸವವು ಗೋನೂರು, ಚಿತ್ರದುರ್ಗ, ಸೀಬಾರ, ಗೂಳಯ್ಯನಹಟ್ಟಿ, ಕ್ಯಾಸಾಪುರ, ಕಡ್ಲೇಗುದ್ದು, ಕೋಣನೂರು, ಚುಕ್ಕೇನಹಳ್ಳಿ, ಸಿರಿಗೆರೆ, ದಡ್ಡಿಗೆನಹಾಳ್, ಡಿ.ಮದಕರಿಪುರ, ಮಿಂಚೇರಿಪುರದವರಗೆ ಯಾತ್ರೆ ಸಾಗಲಿದೆ.
ಸಿಂಗಾರಗೊಂಡ ಬಚ್ಚಬೋರನಹಟ್ಟಿ: ಬುಡಕಟ್ಟು ಜನಾಂಗದ ಜನಕ, ಗೋರಕ್ಷಕ, ನುಡಿದಂತೆ ನಡೆದ ಸತ್ಯಸಂತ, ದಾಸರ ದಂಡಿನ ಒಡೆಯ, ಮಾತೆಯರಾದ ಕಂಚವ್ವ ಕಾಮವ್ವರ ಪ್ರಿಯ ಸಖ, ಗಾದ್ರಿಮಲೆ ಹೆಬ್ಬುಲಿ ಗಾದ್ರಿಪಾಲನಾಯಕನ ಮಿಂಚೇರಿ ಯಾತ್ರಾ ಮಹೋತ್ಸವಕ್ಕೆ ಈಗಾಗಲೇ ಬಚ್ಚಬೋರನಹಟ್ಟಿ ಗ್ರಾಮ ಸಿಂಗಾರಗೊಂಡಿದೆ. ಗ್ರಾಮದ ಪ್ರಮುಖ ಬೀದಿಗಳಲ್ಲಿ ವಿದ್ಯುತ್ ದೀಪಾಲಂಕಾರಗಳು, ಬಣ್ಣ ಬಣ್ಣದ ಲೈಂಟಿಗ್ಸ್ಗಳಿಂದ ಗ್ರಾಮ ಝಗಮಗಿಸುತ್ತಿದುದ, ಮಿಂಚೇರಿ ಸಿರಿ ನೋಡಲು ಬನ್ನಿ ಎಂಬ ಸ್ವಾಗತ ಕೋರುವ ಪ್ಲೇಕ್ಸ್ಗಳು ಗ್ರಾಮದ ತುಂಬೆಲ್ಲಾ ರಾರಾಜಿಸುತ್ತಿವೆ.