ತಿರುವನಂತಪುರಂ: ತನ್ನ ಬಾಯ್ಫ್ರೆಂಡ್ ಜೊತೆ ರಾತ್ರಿ ಮದ್ಯ ಸೇವಿಸಿದ ಯುವತಿ ನಿಗೂಢವಾಗಿ ಸಾವನ್ನಪ್ಪಿದ ಘಟನೆ ಕೊಯಮತ್ತೂರಿನಲ್ಲಿ ನಡೆದಿದೆ. ಈ ಪ್ರಕರಣದ ಸಂಬಂಧ ಯುವತಿಯ ಗೆಳೆಯನನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ನೀಲಗಿರಿ ಜಿಲ್ಲೆಯ ಊಟಿಯ ಪಿಂಕರ್ ಪೋಸ್ಟ್ ಮೂಲದ ರಿತಿ ಏಂಜೆಲ್ (19) ಮೃತ ಯುವತಿ. ಊಟಿಯ ಬಾಂಬೆ ಕ್ಯಾಸಲ್ ನಿವಾಸಿ ಆಕಾಶ್ (20) ಬಂಧಿತ ಯುವಕ. ಇವರಿಬ್ಬರು 10ನೇ ತರಗತಿಯಲ್ಲಿ ಒಟ್ಟಿಗೆ ಓದಿದ್ದರಿಂದ ಪರಿಚಯವಾಗಿ ಪ್ರೀತಿಯಲ್ಲಿದ್ದರು. ರಿತಿ ಏಂಜೆಲ್ ಕೊಯಮತ್ತೂರಿನ ಖಾಸಗಿ ನರ್ಸಿಂಗ್ ಕಾಲೇಜಿಗೆ ಮತ್ತು ಆಕಾಶ್ ನೀಲಗಿರಿಯ ಖಾಸಗಿ ಎಂಜಿನಿಯರಿಂಗ್ ಕಾಲೇಜಿಗೆ ಸೇರಿಕೊಂಡಿದ್ದ. ಪ್ರೇಮಿಗಳು ಸಮಯ ಸಿಕ್ಕಾಗೆಲ್ಲಾ ಭೇಟಿಯಾಗಿ ತಿರುಗಾಡುತ್ತಿದ್ದರು. ಕಳೆದ ಶನಿವಾರ ಕಾಲೇಜಿಗೆ ರಜೆ ಇದ್ದು, ಗೆಳೆಯನ ಮನವಿಯಂತೆ ಕೊಯಮತ್ತೂರಿನಿಂದ ರಿತಿ ಏಂಜೆಲ್ ಬಂದಿದ್ದಳು. ಮದ್ಯ ಖರೀದಿಸಿದ ಬಳಿಕ ವಿದ್ಯಾರ್ಥಿನಿಯನ್ನು ಗೆಳೆಯ ದ್ವಿಚಕ್ರ ವಾಹನದಲ್ಲಿ ಹತ್ತಿಸಿ ತನ್ನ ಮನೆಗೆ ಕರೆದುಕೊಂಡು ಹೋಗಿದ್ದಾನೆ. ಅವರು ಆನ್‌ಲೈನ್‌ನಲ್ಲಿ ಆಹಾರವನ್ನು ಬುಕ್ ಮಾಡಿದ್ದಾರೆ. ಇದರ ಬೆನ್ನಲ್ಲೇ ಆಕಾಶ್ ಮತ್ತು ರಿತಿ ಏಂಜೆಲ್ ಮದ್ಯ ಸೇವಿಸಿದ್ದಾರೆ. ಇದಾದ ಬಳಿಕ ಮೋಟಾರ್ ಸೈಕಲ್‌ನಲ್ಲಿ ಸಮೀಪದ ಪೈನ್ ಅರಣ್ಯ ಪ್ರದೇಶಕ್ಕೆ ತೆರಳಿ ಮ್ಯಾಜಿಕ್ ಮಶ್ರೂಮ್‌ಗಳನ್ನು ತೆಗೆದುಕೊಂಡು ವೈನ್ ಸಮೇತ ತಿಂದಿದ್ದಾರೆ. ಇದರಿಂದ ಇಬ್ಬರೂ ಮಾದಕ ವ್ಯಸನಕ್ಕೆ ಒಳಗಾಗಿ ಗೊಂದಲದ ಗೂಡಾಗಿದ್ದಾರೆ. ನಂತರ ಇಬ್ಬರೂ ನಿದ್ರೆಗೆ ಜಾರಿದ್ದಾರೆ. ಬೆಳಗ್ಗೆ ಆಕಾಶ್ ಗೆಳತಿ ರಿತಿ ಏಂಜೆಲ್‌ಳನ್ನು ಎಬ್ಬಿಸಿದರೂ ಏಳದ ಕಾರಣ ಆಂಬ್ಯುಲೆನ್ಸ್‌ಗಾಗಿ 108ಕ್ಕೆ ಕರೆ ಮಾಡಿದ್ದಾರೆ. ವೈದ್ಯರು ಯುವತಿಯನ್ನು ಪರೀಕ್ಷಿಸಿ ಆಕೆ ಮೃತಪಟ್ಟಿರುವ ಬಗ್ಗೆ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ತೆರಳಿದ ಪೊಲೀಸರು ಮೃತದೇಹವನ್ನು ವಶಪಡಿಸಿಕೊಂಡು ಮರಣೋತ್ತರ ಪರೀಕ್ಷೆಗಾಗಿ ಊಟಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆಕಾಶ್‌ನನ್ನು ಬಂಧಿಸಿದ್ದಾರೆ.