ಬೆಂಗಳೂರು: ಬಿಗ್ಬಾಸ್ ಕಾರ್ಯಕ್ರಮದ ಮೂಲಕ ಸಾಕಷ್ಟು ಜನಪ್ರಿಯತೆ ಗಳಿಸಿರುವ ವರ್ತೂರು ಸಂತೋಷ್ ಅವರು ಪ್ರಾಣಿ ಸಾಗಾಟ ನಿಯಮವನ್ನು ಉಲ್ಲಂಘಿಸಿದ್ದಾರೆಂದು ಅವರ ವಿರುದ್ಧ ಪ್ರಕರಣ ದಾಖಲಾಗಿದೆ.
ವರ್ತೂರು ಸಂತೋಷ್ ಅವರು ಪ್ರಾಣಿಗಳ ಸಾಗಾಣಿಕೆ ನಿಯಮ ಉಲ್ಲಂಘಿಸಿ, ಅಸುರಕ್ಷಿತ ರೀತಿಯಿಂದ ಪ್ರಾಣಿಗಳನ್ನು ಸಾಗಾಟ ಮಾಡಿದ್ದಾರೆಂದು ಆರೋಪಿಸಿ ಪ್ರಾಣಿ ಕಲ್ಯಾಣ ಅಧಿಕಾರಿ ಹರೀಶ್ ಎಂಬುವರು ದೂರು ನೀಡಿದ್ದಾರೆ. ದೂರಿನ ಮೇರೆಗೆ ವರ್ತೂರು ಸಂತೋಷ್ ಅವರನ್ನು ಪೊಲೀಸ್ ಠಾಣೆಗೆ ಕರೆಸಿ ವಿಚಾರಣೆ ಕೂಡ ಮಾಡಲಾಗಿದೆ ಎನ್ನಲಾಗಿದೆ.
ಹಳ್ಳಿಕಾರ್ ರೇಸ್ ಮಾಡಲು ಸಜ್ಜಾಗಿರುವ ವರ್ತೂರು ಸಂತೋಷ್ ಟ್ರಕ್ ಒಂದರಲ್ಲಿ 9 ಹೋರಿಗಳನ್ನು ತುಂಬಿ ಸಾಗಾಟ ಮಾಡಿದ್ದಾರೆ. ಜೊತೆಗೆ ಅದೇ ಟ್ರಕ್ನಲ್ಲಿ ಕೆಲ ವಸ್ತುಗಳನ್ನು ಕೂಡ ತುಂಬಿಸಿದ್ದಾರೆ. ಇದು ಪ್ರಾಣಿ ಸಾಗಾಟ ನಿಯಮಕ್ಕೆ ವಿರುದ್ಧವಾಗಿದೆ ಎಂದು ಆರೋಪಿಸಿ ಅಧಿಕಾರಿ ಹರೀಶ್, ವರ್ತೂರು ಸಂತೋಷ್ ವಿರುದ್ಧ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ವರ್ತೂರು ಸಂತೋಷ್ ವಿರುದ್ಧ ದೂರು ನೀಡಿರುವ ಅಧಿಕಾರಿ ಹರೀಶ್ ಅವರು, ಕ್ರಮಕ್ಕೆ ಒತ್ತಾಯಿಸಿದ್ದಾರೆ. ಅವರ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಲು ಕೂಡ ಅಧಿಕಾರಿ ಯೋಜನೆ ಹಾಕಿದ್ದಾರೆ ಎನ್ನಲಾಗಿದೆ. ಇದರಿಂದ ಹಳ್ಳಿಕಾರ್ ರೇಸ್ ನಡೆಸಲು ಸಜ್ಜಾಗುತ್ತಿರುವ ವರ್ತೂರು ಸಂತೋಷ್ಗೆ ಸವಾಲು ಎದುರಾಗಿದೆ.