ಬೆಂಗಳೂರು: ಬಿಜೆಪಿಯವರ ರೀತಿ ರೆಸಾರ್ಟ್ ಗೆ ಹೋಗಿ ಸ್ವಿಮ್ ಮಾಡಿದ್ದಲ್ಲ ಅದು. ಕಾರ್ಪೊರೇಷನ್ ಸ್ವಿಮ್ಮಿಂಗ್ ಪೂಲ್ ನಲ್ಲಿ ಸ್ವಿಮ್ ಮಾಡ್ದೆ ತಪ್ಪೇನಿದೆ? ನಂತರ ಆಸ್ಪತ್ರೆಗಳಿಗೆ ಭೇಟಿ ನೀಡಿ ನನ್ನ ಕೆಲಸ ಮಾಡಿದ್ದೇನೆ ಎಂದು ಬಿಜೆಪಿ ವಿರುದ್ಧ ಸಚಿವ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದ್ದಾರೆ.
ದಿನೇಶ್ ಗುಂಡೂರಾವ್ ಸ್ವಿಮ್ಮಿಂಗ್ ಮಾಡಿರುವ ವಿಡಿಯೋ ಹಾಗೂ ಫೋಟೋವನ್ನು ವ್ಯಂಗ್ಯವಾಗಿ ಬಿಜೆಪಿ ವೈರಲ್ ಮಾಡಿತ್ತು. ಈ ಬಗ್ಗೆ ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರಿಗೆ ಕೆಲಸ ಇಲ್ಲ, ಸ್ವಿಮ್ಮಿಂಗ್ ಒಂದು ಉತ್ತಮ ಹವ್ಯಾಸ. ವಾಕಿಂಗ್, ಜಾಗಿಂಗ್, ರೀತಿ ಸ್ವಿಮ್ಮಿಂಗ್ ಕೂಡ ಆರೋಗ್ಯಕರ ಹವ್ಯಾಸ. ಬಿಜೆಪಿ ನಾಯಕರು ಸುಮ್ಮನೆ ಸುಳ್ಳುಗಳನ್ನು ಹಬ್ಬಿಸುತ್ತಾರೆ ಅಷ್ಟೇ. ಡೆಂಗ್ಯೂ ಸೊಳ್ಳೆಗಿಂತ ವೇಗವಾಗಿ ಬಿಜೆಪಿಯವರು ಸುಳ್ಳು ಹರಡಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಬಿಜೆಪಿಯವರಿಗೆ ಬರೀ ಮೋಜು ಮಸ್ತಿ ಎಂದು ಮಾತನಾಡಿ ಅಭ್ಯಾಸ ಇದೆ. ನಿನ್ನೆ ನೆಲಮಂಗಲ ಬಳಿ ಜನರಿಗೆ ಮದ್ಯ, ಬಾಡೂಟ ಹಂಚಿದ್ದರಲ್ಲ ಆ ರೀತಿ ನಾನೇನಾದ್ರೂ ಮಾಡಿದ್ದೀನಾ ಎಂದು ಅವರು ಪ್ರಶ್ನಿಸಿದರು.
ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಳವಾಗುತ್ತಿರುವ ಬಗ್ಗೆ ಮಾತನಾಡಿದ ಅವರು, ರಾಜ್ಯದಲ್ಲಿ ಆತಂಕ ಪಡುವ ಪರಿಸ್ಥಿತಿ ಏನೂ ಇಲ್ಲ. ಡೆಂಗ್ಯೂ ನಿಯಂತ್ರಣ ಸಂಬಂಧ ಅಧಿಕಾರಿಗಳ ಜೊತೆ ಚರ್ಚಿಸಿದ್ದೇನೆ. ಸೋಂಕಿತರು ಮತ್ತು ಮೃತಪಟ್ಟವರ ಡೇಟಾ ರಿಲೀಸ್ ಮಾಡುತ್ತಿದ್ದೇವೆ. ಝೀಕಾ ವೈರಸ್ ಕೂಡ ಒಂದೆರಡು ಕಡೆ ಕಂಡು ಬಂದಿದೆ. ತಾಂತ್ರಿಕ ಸಲಹಾ ಸಮಿತಿ ಜೊತೆಯೂ ಕೂಡ ಸಭೆ ಮಾಡಲಾಗಿದೆ. ಒಂದಿಷ್ಟು ಮಂದಿ ಮೆಡಿಕಲ್ ಎಮರ್ಜೆನ್ಸಿ ಅಂತ ಘೋಷಿಸಿ ಎಂದಿದ್ದಾರೆ. ಆತಂಕ ಸೃಷ್ಟಿಸುವ ಪರಿಸ್ಥಿತಿಯೂ ಇಲ್ಲ. ಜನರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇವೆ ಎಂದರು.