ನವದೆಹಲಿ: ಗುಜರಾತ್ ಜೈಲಿನಲ್ಲಿರುವ ಕುಖ್ಯಾತ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೊಯಿಯನ್ನು ಯಾವ ಪೊಲೀಸ್ ಅಧಿಕಾರಿಯಾಗಲಿ ಹತ್ಯೆಗೈದರೆ ಅವರಿಗೆ 1,11,11,111 ರೂ. ಬಹುಮಾನ ನೀಡುವುದಾಗಿ ಕ್ಷತ್ರಿಯ ಕರ್ಣಿ ಸೇನಾ ಘೋಷಿಸಿದೆ. ಬಿಷ್ಣೊಯಿಯನ್ನು ಹತ್ಯೆಗೈಯುವ ಯಾವುದೇ ಪೊಲೀಸ್ ಅಧಿಕಾರಿ ಇರಲಿ ಅವರಿಗೆ 1,11,11,111 ರೂ. ಬಹುಮಾನ ನೀಡುವುದಾಗಿ ಕರ್ಣಿ ಸೇನಾ ರಾಷ್ಟ್ರೀಯ ಅಧ್ಯಕ್ಷ ರಾಜ್ ಶೇಖಾವತ್ ಘೋಷಿಸಿದ್ದಾರೆ ಎಂದ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ಇತ್ತೀಚೆಗಷ್ಟೇ ಹತ್ಯೆಗೀಡಾದ ಎನ್‌ಸಿಪಿ ಮುಖಂಡ ಬಾಬಾ ಸಿದ್ದೀಕಿ ಹತ್ಯೆಯ ಹೊಣೆಯನ್ನು ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ಹೊತ್ತುಕೊಂಡಿತ್ತು. ಸಾಬರಮತಿ ಜೈಲಿನಲ್ಲಿ ಬಂಧಿಯಾಗಿರುವ ಬಿಷ್ಣೋಯಿ ಪಾತಕ ಕೃತ್ಯ ಎಸಗುತ್ತಿದ್ದರೂ ಕೇಂದ್ರ ಸರ್ಕಾರ ಮತ್ತು ಗುಜರಾತ್ ಸರ್ಕಾರ ಕಣ್ಮುಚ್ಚಿ ಕುಳಿತಿರುವುದಾಗಿ ಶೇಖಾವತ್ ಆರೋಪಿಸಿದ್ದಾರೆ. ಬಾಲಿವುಡ್ ನಟ ಸಲ್ಮಾನ್ ಖಾನ್ ಹತ್ಯೆಗೆ ಬಿಷ್ಣೊಯಿ ಸಂಚು ರೂಪಿಸಿದ್ದ ಬಗ್ಗೆ ವರದಿಗಳಾಗಿದ್ದವು.