ಪಾಟ್ನಾ: ಬೈಕ್ನಲ್ಲಿ ಬಂದ ಗುಂಪೊಂದು ಮೊದಲ ಬಾರಿಗೆ ಚುನಾಯಿತರಾಗಿದ್ದ ಕೌನ್ಸಿಲರ್, ಆರ್ಜೆಡಿ ನಾಯಕನನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಬಿಹಾರ್ನಲ್ಲಿ ಮಂಗಳವಾರ ಸಂಭವಿಸಿದೆ.
ಸ್ಥಳೀಯ ಕೌನ್ಸಿಲರ್ ಪಂಕಜ್ ರೈ ಮೃತಪಟ್ಟವರು.
ಪಂಕಜ್ ರೈ ಅವರು ನಿನ್ನೆ ಸಂಜೆ ತಮ್ಮ ನಿವಾಸದ ಬಳಿಯ ಬಟ್ಟೆ ಅಂಗಡಿಯಲ್ಲಿ ಕುಳಿತಿದ್ದರು. ಈ ವೇಳೆ ದ್ವಿಚಕ್ರವಾಹನದಲ್ಲಿ ಬಂದ ಮೂವರು, ಪಂಕಜ್ ರೈ ಅವರ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ.
ಈ ವೇಳೆ ಪಂಕಜ್ ರೈ ಅವರು ಆತ್ಮರಕ್ಷಣೆಗೆ ಮನೆ ಕಡೆಗೆ ಓಡಿದ್ದಾರೆ. ಆದರೂ, ದಾಳಿಕೋರರು ಅವರನ್ನು ಹಿಂಬಾಲಿಸಿ ಗುಂಡಿನ ದಾಳಿ ನಡೆಸಿದ್ದಾರೆ. ಗುಂಡಿನ ಸದ್ದು ಕೇಳಿ ತಕ್ಷಣ ಆತನ ಮನೆಯವರು ಮತ್ತು ಸ್ಥಳೀಯರು ಧಾವಿಸಿ ಆತನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಪಂಕಜ್ ರೈ ಅವರು ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಎನ್ಡಿಎ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲವಾಗಿದೆ. ನಿತೀಶ್ ಕುಮಾರ್ ನೇತೃತ್ವದ ಎನ್ಡಿಎ ಗೂಂಡಾಗಳು ಹಾಜಿಪುರದಲ್ಲಿ ವಾರ್ಡ್ ಕೌನ್ಸಿಲರ್ ಪಂಕಜ್ ರೈ ಅವರನ್ನು ರಾತ್ರಿ ಗುಂಡಿಕ್ಕಿ ಕೊಂದಿದ್ದಾರೆ. ಮುಖ್ಯಮಂತ್ರಿ ಮತ್ತು ಇಬ್ಬರು ಉಪಮುಖ್ಯಮಂತ್ರಿಗಳು ಅವರ ಗೂಂಡಾಗಳು ಅವ್ಯವಸ್ಥೆಯನ್ನು ಸೃಷ್ಟಿಸುತ್ತಿರುವಾಗ ಶಾಂತಿಯುತವಾಗಿ ನಿದ್ರಿಸುತ್ತಿದ್ದಾರೆ ಎಂದು ಆರ್ಜೆಡಿ ನಾಯಕ ಹಾಗೂ ಮಾಜಿ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
				
															
                    
                    
                    
                    
                    

































