ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ 110 ಹಳ್ಳಿಗಳಿಗೆ ಕಾವೇರಿ ಕುಡಿಯುವ ನೀರು ಒದಗಿಸುವ ಕಾವೇರಿ 5 ನೇ ಹಂತದ ವಿವಿಧ ಕಾಮಗಾರಿಗಳು ಭರದಿಂದ ಸಾಗುತ್ತಿವೆ. ಅದರಂತೆ ಕೆಂಗೇರಿ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯ ಉತ್ತರಹಳ್ಳಿ ರಸ್ತೆಯಲ್ಲಿ ಕುಡಿಯುವ ನೀರಿನ 1900 ಎಂ.ಎಂ ಡಯಾ ಪೈಪ್ ಲೈನ್ ಅಳವಡಿಸುವ ಕಾಮಗಾರಿ ಹಿನ್ನೆಲೆಯಲ್ಲಿ ಬಿಜಿಎಸ್ ಜಂಕ್ಷನ್ ಕಡೆಯಿಂದ ಮಧು ಪೆಟ್ರೋಲ್ ಬಂಕ್ ಜಂಕ್ಷನ್ (ಪೂರ್ವದಿಂದ ಪಶ್ಚಿಮಕ್ಕೆ) ವರೆಗಿನ ಸಂಚರಿಸುವ ಮಾರ್ಗದಲ್ಲಿ ಎಲ್ಲಾ ಮಾದರಿಯ ವಾಹನಗಳ ಸಂಚಾರವನ್ನು 1 ತಿಂಗಳವರೆಗೆ ಬೆಂಗಳೂರು ಸಂಚಾರ ಪೊಲೀಸರು ತಾತ್ಕಾಲಿಕವಾಗಿ ನಿರ್ಬಂಧಿಸಿದ್ದಾರೆ. ಕೆಂಗೇರಿ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯ ಉತ್ತರಹಳ್ಳಿ ರಸ್ತೆಯು ದ್ವಿಮುಖ ಸಂಚಾರದ ರಸ್ತೆಯಾಗಿದ್ದು, ಸೆ. 27ರಿಂದ ಕಾಮಗಾರಿ ಮುಗಿಯುವ ವರೆಗೆ ಸುಗಮ ಸಂಚಾರದ ದೃಷ್ಟಿಯಿಂದ, ಬಿಜಿಎಸ್ ಜಂಕ್ಷನ್ ಕಡೆಯಿಂದ ಮಧು ಪೆಟ್ರೋಲ್ ಬಂಕ್ ಜಂಕ್ಷನ್ (ಪೂರ್ವದಿಂದ ಪಶ್ಚಿಮಕ್ಕೆ) ವರೆಗಿನ ಮಾರ್ಗದಲ್ಲಿ ವಾಹನಗಳ ಸಂಚಾರವನ್ನು 1 ತಿಂಗಳವರೆಗೆ ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ. ಪರ್ಯಾಯ ಮಾರ್ಗ ಬಿಜಿಎಸ್ ಜಂಕ್ಷನ್ ಕಡೆಯಿಂದ ಮಧು ಪೆಟ್ರೋಲ್ ಬಂಕ್ ಜಂಕ್ಷನ್ (ಮೈಸೂರು ರಸ್ತೆ) ಕಡೆಗೆ ಸಂಚರಿಸುವ ವಾಹನಗಳು ಬಿಜಿಎಸ್ ಆಸ್ಪತ್ರೆ ಜಂಕ್ಷನ್‌ನಲ್ಲಿ ಬಲ ತಿರುವು ಪಡೆದು ಮೂಕಾಂಬಿಕ ಸರ್ಕಲ್, ವೃಷಭಾವತಿ ಮೋರಿ ಬ್ರಿಡ್ಜ್ ಮೂಲಕ ಮೈಸೂರು ರಸ್ತೆಗೆ ಪ್ರವೇಶಿಸಬಹುದು. ಮೈಸೂರು ರಸ್ತೆಯಿಂದ ಉತ್ತರಹಳ್ಳಿಗೆ ಹೋಗುವ ವಾಹನಗಳು ಮೈಲಸಂದ್ರ ವಿಲೇಜ್ ಜಂಕ್ಷನ್‌ನಲ್ಲಿ ಬಲ ತಿರುವು ಪಡೆದು ವಿಲೇಜ್ ಬ್ಯಾಕ್ ಗೇಟ್ ರಸ್ತೆ ಹಾಗೂ ಬಿಜಿಎಸ್ ಜಂಕ್ಷನ್ ಮೂಲಕ ಉತ್ತರಹಳ್ಳಿ ತಲುಪ ಬಹುದಾಗಿರುತ್ತದೆ. ನಗರದ ಕಡೆಯಿಂದ ಉತ್ತರಹಳ್ಳಿಗೆ ಹೋಗುವ ವಾಹನಗಳು ಮೈಲಸಂದ್ರ ಜಂಕ್ಷನ್ ನಲ್ಲಿ ಎಡ ತಿರುವು ಪಡೆದು ಬಿಜಿಎಸ್ ಜಂಕ್ಷನ್ ಮೂಲಕ ಸಾಗಬಹುದು. ವೈಟ್ ಟಾಪಿಂಗ್ ಕಾಮಗಾರಿ : ಎಂಇಐ ರಸ್ತೆಯಲ್ಲಿ ಅ.1ರಿಂದ ಮಾರ್ಗ ಬದಲಾವಣೆ ಯಶವಂತಪುರ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಿಬಿಎಂಪಿ ವತಿಯಿಂದ ಎಂಇಐ (ಮೈಸೂರು ಎಲೆಕ್ಟಿಕಲ್ ಇಂಡಸ್ಟ್ರೀಸ್) ರಸ್ತೆಯಲ್ಲಿ ಕಂಠೀರವ ಸ್ಟುಡಿಯೋ ಮುಖ್ಯರಸ್ತೆಯಿಂದ ತುಮಕೂರು ಮುಖ್ಯರಸ್ತೆಯ ವರೆಗೆ ವೈಟ್ ಟಾಪಿಂಗ್ ಕಾಮಗಾರಿಯನ್ನು ಕೈಗೊಳ್ಳಲಾಗುತ್ತಿರುವ ಹಿನ್ನೆಲೆಯಲ್ಲಿ ಈ ಮಾರ್ಗದಲ್ಲಿ ಅ.1ರಿಂದ ವಾಹನ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ. ಎಂಇಐ ರಸ್ತೆಯು ದ್ವಿಮುಖ ಸಂಚಾರದ ರಸ್ತೆಯಾಗಿದ್ದು ತುಮಕೂರು ರಸ್ತೆಯಿಂದ ಕಂಠೀರವ ಸ್ಟುಡಿಯೋ ಕಡೆಗೆ ಚಲಿಸುವ ವಾಹನಗಳು ಎಂದಿನಂತೆ ರಸ್ತೆಯ ಎಡಭಾಗದಲ್ಲಿ ಸಂಚರಿಸಬಹುದಾಗಿರುತ್ತದೆ. ಆದರೆ ಕಾಮಗಾರಿ ಹಾಗೂ ಸುಗಮ ಸಂಚಾರದ ಹಿತದೃಷ್ಟಿಯಿಂದ ಎಂಇಐ ರಸ್ತೆಯಲ್ಲಿ ಕಂಠೀರವ ಸ್ಟುಡಿಯೋ ಮುಖ್ಯರಸ್ತೆಯಿಂದ ತುಮಕೂರು ರಸ್ತೆ ಕಡೆಗೆ (ದಕ್ಷಿಣ ದಿಕ್ಕಿನಿಂದ ಉತ್ತರ ದಿಕ್ಕಿಗೆ) ಸಂಚರಿಸುವ ಮಾರ್ಗದಲ್ಲಿ ಎಲ್ಲಾ ಮಾದರಿಯ ವಾಹನಗಳ ಸಂಚಾರವನ್ನು ಅ.1 ರಿಂದ ಕಾಮಗಾರಿ ಮುಗಿಯುವವರೆಗೂ ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ ಎಂದು ಬೆಂಗಳೂರು ಸಂಚಾರ ಪೊಲೀಸ್ ವಿಭಾಗ ತಿಳಿಸಿದೆ. ಪರ್ಯಾಯ ಮಾರ್ಗ ಕಂಠೀರವ ಸ್ಟುಡಿಯೋ ಮುಖ್ಯ ರಸ್ತೆಯಿಂದ ಎಂ.ಇ.ಐ ರಸ್ತೆಯ ಮೂಲಕ ತುಮಕೂರು ರಸ್ತೆ ಕಡೆಗೆ ಹೊಗುವ ವಾಹನಗಳು ಕಂಠೀರವ ಸ್ಟುಡಿಯೋ ಮುಖ್ಯರಸ್ತೆಯಲ್ಲಿ ಸಾಗಿ ಎಫ್.ಟಿ.ಐ ಜಂಕ್ಷನ್‌ನಲ್ಲಿ ಬಲ ತಿರುವು ಪಡೆದು ಔಟರ್ ರಿಂಗ್ ರಸ್ತೆಯ ಮೂಲಕ ಸಿ.ಎಂ.ಟಿ.ಐ ಜಂಕ್ಷನ್‌ನಲ್ಲಿ ತುಮಕೂರು ರಸ್ತೆಯನ್ನು ಪ್ರವೇಶಿಸಬಹುದಾಗಿದೆ. ಕಂಠೀರವ ಸ್ಟುಡಿಯೋ ಮುಖ್ಯ ರಸ್ತೆಯಿಂದ ಎಂ.ಇ.ಐ ರಸ್ತೆಯ ಮೂಲಕ ಬೆಂಗಳೂರು ನಗರ ಕಡೆಗೆ ಬರುವ ವಾಹನಗಳು ಕಂಠೀರವ ಸ್ಟುಡಿಯೋ ಮುಖ್ಯರಸ್ತೆ & ಶಂಕರನಗರ ಮುಖ್ಯ ರಸ್ತೆಯಲ್ಲಿ ಸಾಗಿ ಮಹಾಲಕ್ಷ್ಮೀ ಲೇಔಟ್ ವಸುಧಾ ಡೆಂಟಲ್ ಕ್ಲೀನಿಕ್ ಬಳಿ ಎಡ ತಿರುವು ಪಡೆದು ಮಹಾಲಕ್ಷ್ಮೀ ಲೇಔಟ್ ಮುಖ್ಯ ರಸ್ತೆ ಮೂಲಕ ವೆಸ್ಟ್ ಆಫ್ ಕಾರ್ಡ್ ರಸ್ತೆ ಪ್ರವೇಶಿಸಬಹುದಾಗಿದೆ.