ಬೆಂಗಳೂರು: ಪೋಕ್ಸೋ ಪ್ರಕರಣದ ಆರೋಪಿಯಾಗಿರುವ ಮಾಜಿ ಸಿಎಂ ಯಡಿಯೂರಪ್ಪ ಅವರು ಸೋಮವಾರ ಬೆಳಗ್ಗೆ 11ಗಂಟೆ ಸುಮಾರಿಗೆ ಅರಮನೆ ಮೈದಾನದ ರಸ್ತೆಯಲ್ಲಿರುವ ಕಾರ್ಲ್ ಟನ್ ಭವನದ ಸಿಐಡಿ ಕಚೇರಿಗೆ ಹಾಜರಾದರು. ಬಂಧನದ ಭೀತಿಗೊಳಗಾಗಿ ಹೈಕೋರ್ಟ್ ಮೊರೆ ಹೋಗಿದ್ದ ಮಾಜಿ ಸಿಎಂ ಯಡಿಯೂರಪ್ಪ ಅವರು ತಾತ್ಕಾಲಿಕವಾಗಿ ನಿರಾಳರಾಗಿದ್ದರು. ಎಂಬತ್ತೊಂದು ವರ್ಷ ವಯಸ್ಸಿನ ಯಡಿಯೂರಪ್ಪನವರು ಎಲ್ಲಿಗೂ ಓಡಿ ಹೋಗಲ್ಲ. ಅವರು ಹೇಳಿದಂತೆಯೇ ಸೋಮವಾರ ಬಂದು ವಿಚಾರಣೆಗೆ ಹಾಜರಾಗುತ್ತಾರೆಂದು ಹೈಕೋರ್ಟ್ ನ್ಯಾ.ಕೃಷ್ಣ ದೀಕ್ಷಿತ್ ಅವರ ಏಕಸದಸ್ಯ ಪೀಠ ಯಡಿಯೂರಪ್ಪನರ ಮೇಲಿದ್ದ ಜಾಮೀನುರಹಿತ ಬಂಧನದ ವಾರಂಟ್ ಅನ್ನು ರದ್ದುಗೊಳಿಸಿ ಆದೇಶಿಸಿತ್ತು. ಅಂದು ದೆಹಲಿಯಲ್ಲಿದ್ದ ಮಾಜಿ ಸಿಎಂ ಪರ ವಕೀಲರು ಹೈಕೋರ್ಟ್ ಗ ಯಡಿಯೂರಪ್ಪ ಪರ ಅರ್ಜಿ ಸಲ್ಲಿಸಿದ್ದರು. ಸಹಾಯ ಕೇಳಲೆಂದು ಬಂದ ಅಪ್ರಾಪ್ತೆಯ ಮೇಲೆ ಮಾಜಿ ಸಿಎಂ ಯಡಿಯೂರಪ್ಪ ಅವರು ಲೈಂಗಿಕ ದೌರ್ಜನ್ಯ ನಡೆಸಿದ್ದಾರೆಂದು ಆರೋಪಿಸಿ ಮಗುವಿನ ಪೋಷಕರು ದೂರು ಸಲ್ಲಿಸಿದ್ದರು. ಇದಾದ ಬಳಿಕ ಅಪ್ರಾಪ್ತೆಯ ತಾಯಿ ಇತ್ತೀಚೆಗೆ ಮೃತಪಟ್ಟಿದ್ದರು. ಅವರ ಮರಣಾ ನಂತರ ಅಪ್ರಾಪ್ತೆಯ ಸಹೋದರ ಪ್ರಕರಣವನ್ನು ಮುಂದುವರಿಸಿದ್ದು, ತಮಗೆ ನ್ಯಾಯಬೇಕೆಂದು ಪಟ್ಟು ಹಿಡಿದಿದ್ದಾರೆ. ಇನ್ನು, ಮಾಜಿ ಸಿಎಂ ಯಡಿಯೂರಪ್ಪನವರ ಮೇಲಿನ ಪೋಕ್ಸೋ ಪ್ರಕರಣ ಹಿನ್ನೆಲೆ ಸಿಐಡಿ ತನಿಖೆ ನಡೆಯುತ್ತಿದ್ದು, ವಿಶೇಷ ಕೋರ್ಟ್, ಎರಡನೇ ನೋಟೀಸ್ ಗೆ ಬಿಎಸ್‌ವೈ ಹಾಜರಾಗಿಲ್ಲವೆಂಬ ಕಾರಣಕ್ಕೆ ಜಾಮೀನು ರಹಿತ ಬಂಧನದ ವಾರಂಟ್ ಅನ್ನು ಜಾರಿಗೊಳಿಸಿತ್ತು.