ಬೆಂಗಳೂರು: ಕಿಲ್ಲರ್ ಬಿಎಂಟಿಸಿಗೆ 5 ವರ್ಷದ ಬಾಲಕಿ ಬಲಿಯಾಗಿರೋ ಘಟನೆ ಉತ್ತರಹಳ್ಳಿ ಮುಖ್ಯರಸ್ತೆಯ ಪದ್ಮಾವತಿ ಸಿಲ್ಕ್ ಶೋ ರೂಂ ಬಳಿ ನಡೆಸಿದೆ. ಘಟನೆಯಲ್ಲಿ 5 ವರ್ಷದ ಪೂರ್ವಿ ರಾವ್ ಸಾವನ್ನಪ್ಪಿದ್ದು, ಪೂರ್ವಿ ಬೆಂಗಳೂರು ಇಂಟರ್ ನ್ಯಾಶನಲ್ ಪಬ್ಲಿಕ್ ಸ್ಕೂಲ್ ನಲ್ಲಿ ಪ್ರಿಕೆಜಿ ಓದುತ್ತಿದ್ದಳು. ಪ್ರತಿನಿತ್ಯ ತಂದೆಯೇ ಮಗಳನ್ನ ಶಾಲೆಗೆ ಬಿಟ್ಟು ಕೆಲಸಕ್ಕೆ ಹೋಗ್ತಿದ್ರು. ಇಂದು ಸಹ ಅದೇ ರೀತಿ ಮಗಳನ್ನ ಶಾಲೆಗೆ ಬಿಡಲು ಹೋಗಿದ್ರು. ಆ ವೇಳೆ ವೇಗವಾಗಿ ಬಂದ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದು ಪೂರ್ವಿ ಮೇಲೆ ಹರಿದಿದೆ.
ಘಟನೆ ಸಂಬಂಧ ಕುಮಾರಸ್ವಾಮಿ ಲೇಔಟ್ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈಗಾಗ್ಲೆ ಬಿಎಂಟಿಸಿ ಚಾಲಕನನ್ನ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ರು ತಿಳಿಸಿದ್ದಾರೆ. ತನಿಖೆ ವೇಳೆ ಬಿಎಂಟಿಸಿ ಬಸ್ ಚಾಲಕನದ್ದೇ ತಪ್ಪು ಎಂಬುದು ತಿಳಿದು ಬಂದಿದೆ. ಪೂರ್ವಿ ಮತ್ತು ತಂದೆ ಪ್ರಸನ್ನ ತೆರಳುತ್ತಿದ್ದ ಬೈಕ್ ಗೆ ಬಸ್ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಹಿಂಬದಿಯಿಂದ ಡಿಕ್ಕಿ ಹೊಡೆದಾಗ ಪೂರ್ವಿ ಮತ್ತು ಪ್ರಸನ್ನ ಕೆಳಗೆ ಬಿದ್ದಿದ್ದಾರೆ. ಈ ವೇಳೆ ಪೂರ್ವಿ ತಲೆ ಮೇಲೆ ಬಸ್ ಹರಿದಿದೆ. ಬಿಎಂಟಿಸಿ ಬಸ್ ಮತ್ತು ಚಾಲಕ ಬಸವರಾಜ ಪೂಜಾರಿಯನ್ನು ವಶಕ್ಕೆ ಪಡೆದು ಪೊಲೀಸ್ರು ತನಿಖೆ ಮುಂದುವರಿಸಿದ್ದಾರೆ.