ಪಾಟ್ನಾ: ಬಿಹಾರದ ಜೆಹಾನಾಬಾದ್ನಲ್ಲಿ ಶ್ರಾವಣದ ನಾಲ್ಕನೇ ಸೋಮವಾರದಂದು ಸಿದ್ದೇಶ್ವರನಾಥ ದೇವಾಲಯಕ್ಕೆ ಪೂಜೆ ಸಲ್ಲಿಸಲು ಹೋಗಿದ್ದ 3 ಮಹಿಳೆಯರು ಸೇರಿ 7 ಮಂದಿ ಭಕ್ತರು ಕಾಲ್ತುಳಿದಿಂದ ಸಾವನ್ನಪ್ಪಿದ್ದಾರೆ. ಅಲ್ಲದೆ ಹಲವರಿಗೆ ಗಾಯಗಳಾಗಿವೆ. ಶ್ರಾವಣ ಮಾಸದ ಸೋಮವಾರದ ಹಿನ್ನೆಲೆಯಲ್ಲಿ ದೇವಸ್ಥಾನದಲ್ಲಿ ತುಂಬಾ ಜನರು ಇದ್ದ ಕಾರಣ ನೂಕುನುಗ್ಗಲು ಏರ್ಪಟ್ಟಿತ್ತು. ರಾಬರ್ ಬೆಟ್ಟ ಹತ್ತುವಾಗ ಮೆಟ್ಟಿಲುಗಳ ಮೇಲೆ ಹಠಾತ್ ಕಾಲ್ತುಳಿತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಜನರು ಒಬ್ಬರನ್ನೊಬ್ಬರು ತುಳಿದುಕೊಳ್ಳುತ್ತಾ ಅಲ್ಲಿ ಇಲ್ಲಿ ಓಡತೊಡಗಿದರು. ಘಟನೆಯ ಬಗ್ಗೆ ಮಾಹಿತಿ ಪಡೆದ ತಕ್ಷಣ, ಪೊಲೀಸ್-ಆಡಳಿತ ತಂಡವು ಸ್ಥಳಕ್ಕೆ ಧಾವಿಸಿದ್ದು, ಪರಿಸ್ಥಿತಿ ನಿಯಂತ್ರಿಸುವಷ್ಟರಲ್ಲಿ ಏಳು ಮಂದಿ ಸಾವನ್ನಪ್ಪಿದ್ದರು. ಸೋಮವಾರ ಬೆಳಗ್ಗೆ ಸೂರ್ಯೋದಯದ ವೇಳೆ ಈ ಅವಘಡ ಸಂಭವಿಸಿದೆ. ಅಪಘಾತದಲ್ಲಿ 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
