ಬೆಂಗಳೂರು: ಭವಾನಿ ರೇವಣ್ಣ ಅವರನ್ನು ಬಂಧಿಸಲು ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಸಿಕ್ಕಿದ ತಕ್ಷಣ ಅವರ ಬಂಧನವಾಗಲಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಭವಾನಿ ರೇವಣ್ಣ ಎಲ್ಲಿದ್ದಾರೋ ಗೊತ್ತಿಲ್ಲ. ಅವರನ್ನು ಪೊಲೀಸರು ಹುಡುಕುತ್ತಿದ್ದು, ಸಿಕ್ಕಿದ ಕೂಡಲೇ ಬಂಧಿಸಲಿದ್ದಾರೆ. ಇದೆಲ್ಲ ಕಾನೂನು ಪ್ರಕಾರವೇ ನಡೆಯುತ್ತದೆ. ಈ ವಿಚಾರ ಸರ್ಕಾರಕ್ಕೆ ಸವಾಲಿನ ಪ್ರಶ್ನೆಯೇ ಅಲ್ಲ ಎಂದರು.
ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ನಾಳೆ ಪರಿಷತ್ ಚುನಾವಣೆ ನಾಮಿನೇಷನ್‌ಗೆ ಕೊನೆಯ ದಿನಾಂಕವಾಗಿದೆ. ಹೀಗಾಗಿ ಸಭೆಯನ್ನು ಕರೆಯಲಾಗಿದ್ದು, ನಾಮಿನೇಷನ್ ಪೇಪರ್‌ಗೆ 10 ಜನ ಸಹಿ ಮಾಡಬೇಕು. ಇದೇ ಕಾರಣಕ್ಕೆ ಸಭೆ ಕರೆದಿದ್ದಾರೆ ಎಂದು ಅವರು ತಿಳಿಸಿದರು.