ಮಾಲೆ: ಭಾರತ ನೀಡಿರುವ 3 ವಿಮಾನಗಳನ್ನು ನಿರ್ವಹಿಸುವಂತಹ ಸಾಮರ್ಥ್ಯವುಳ್ಳ ಪೈಲಟ್‌ಗಳು ನಮ್ಮ ಸೇನೆಯಲ್ಲಿ ಇಲ್ಲ ಎಂದು ಮಾಲ್ಡೀವ್ಸ್ ರಕ್ಷಣಾ ಸಚಿವ ಘಾಸನ್ ಮೌಮೂನ್ ತಿಳಿಸಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದಿನ ಸರ್ಕಾರ ರಚಿಸಿದ ಒಪ್ಪಂದಗಳ ಅಡಿಯಲ್ಲಿ ಕೆಲ ಸೈನಿಕರು ಹಾರಾಟ ಮಾಡಲು ತರಬೇತಿ ಪಡೆದಿದ್ದಾರೆಯೇ ಹೊರತು ಭಾರತ ನೀಡಿರುವ 3 ವಿಮಾನಗಳನ್ನು ನಿರ್ವಹಿಸುವ ಸಾಮರ್ಥ್ಯವುಳ್ಳ ಮಾಲ್ಡೀವ್ಸ್ ಸೈನಿಕರು ಮಾಲ್ಡೀವ್ಸ್ ರಾಷ್ಟ್ರೀಯ ರಕ್ಷಣಾ ಪಡೆ (ಎಂಎನ್‌ಡಿಎಫ್) ಬಳಿ ಇಲ್ಲ. ಇದು ವಿವಿಧ ಹಂತಗಳಲ್ಲಿ ಹಾದುಹೋಗುವ ಅಗತ್ಯವಿರುವ ತರಬೇತಿಯಾಗಿದ್ದರಿಂದ, ವಿವಿಧ ಕಾರಣಗಳಿಂದ ನಮ್ಮ ಸೈನಿಕರು ತರಬೇತಿ ಪೂರ್ಣಗೊಳಿಸಲಿಲ್ಲ. ಹೀಗಾಗಿ, 2 ಹೆಲಿಕಾಪ್ಟರ್ ಗಳು ಮತ್ತು ಡೋರ್ನಿಯರ್ ಅನ್ನು ಹಾರಿಸಲು ಪರವಾನಗಿ ಪಡೆದ ಅಥವಾ ಸಂಪೂರ್ಣವಾಗಿ ಕಾರ್ಯನಿರ್ವಹಿಸುವ ಯಾವುದೇ ಸಿಬ್ಬಂದಿ ಸದ್ಯಕ್ಕೆ ನಮ್ಮ ಬಳಿ ಇಲ್ಲ ಎಂದಿದ್ದಾರೆ.
ಮೇ 10 ರೊಳಗೆ ದ್ವೀಪ ರಾಷ್ಟ್ರದಲ್ಲಿ ಮೂರು ವಾಯುಯಾನ ವೇದಿಕೆಗಳನ್ನು ನಿರ್ವಹಿಸುತ್ತಿರುವ ಎಲ್ಲಾ ಭಾರತೀಯ ಸೇನಾ ಸಿಬ್ಬಂದಿಯನ್ನು ಹಿಂತೆಗೆದುಕೊಳ್ಳುವಂತೆ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ಅವರು ತಿಳಿಸಿದ್ದರು. ಬಳಿಕ ಮಾಲ್ಡೀವ್ಸ್ ಅನ್ನು 76 ಭಾರತೀಯ ರಕ್ಷಣಾ ಸಿಬ್ಬಂದಿ ತೊರೆದಿದ್ದಾರೆ.