ಬುಲ್ಧಾನಾ: ಮಹಾರಾಷ್ಟ್ರದ ಬುಲ್ಧಾನಾ ಜಿಲ್ಲೆಯಲ್ಲಿ ಎರಡು ಖಾಸಗಿ ಬಸ್ಗಳು ಡಿಕ್ಕಿ ಹೊಡೆದು ಮಹಿಳೆಯರು ಸೇರಿದಂತೆ ಆರು ಮಂದಿ ಸಾವನ್ನಪ್ಪಿದ್ದು, ಸುಮಾರು 25 ರಿಂದ 30 ಜನರು ಗಾಯಗೊಂಡ ಘಟನೆ ನಡೆದಿದೆ.
ಬುಲ್ಧಾನಾ ಜಿಲ್ಲೆಯ ಮಲ್ಕಾಪುರ ನಗರದ ಬಳಿ ರಾಷ್ಟ್ರೀಯ ಹೆದ್ದಾರಿ-6ರಲ್ಲಿ ಶನಿವಾರ ಮುಂಜಾನೆ 3 ಗಂಟೆಗೆ ಈ ಅಪಘಾತ ಸಂಭವಿಸಿದೆ.
ಅಪಘಾತಕ್ಕೀಡಾದ ಬಸ್ಗಳಲ್ಲಿ, ಒಂದರಲ್ಲಿ ಅಮರನಾಥ ಯಾತ್ರೆಯಿಂದ ಹಿಂದಿರುಗುವ ಪ್ರಯಾಣಿಕರು ಹಿಂಗೋಲಿ ಕಡೆಗೆ ಹೋಗುತ್ತಿದ್ದರೆ, ಇನ್ನೊಂದು ಬಸ್ ನಾಗ್ಪುರದಿಂದ ನಾಸಿಕ್ಗೆ ಹೋಗುತ್ತಿತ್ತು. ಡಿಕ್ಕಿಯ ರಭಸಕ್ಕೆ ಎರಡೂ ಬಸ್ಗಳ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ವರದಿಗಳ ಪ್ರಕಾರ, ಗಾಯಗೊಂಡವರಲ್ಲಿ ಐವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗಿದೆ.
				
															
                    
                    
                    
                    

































