ಮುಂಬೈ: ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ನಾಯಕ ಮತ್ತು ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕ್ ಅವರನ್ನು ಶನಿವಾರ ಮುಂಬೈನಲ್ಲಿ ಗುಂಡಿಕ್ಕಿ ಕೊಲೆಗೈದ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಲಾಗಿದೆ. ಹರಿಯಾಣದ ಕರ್ನೈಲ್ ಸಿಂಗ್ ಮತ್ತು ಉತ್ತರ ಪ್ರದೇಶದ ಧರ್ಮರಾಜ್ ಕಶ್ಯಪ್ ಎಂದು ಗುರುತಿಸಲಾದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಮೂರನೇ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಸುದ್ದಿಗಾರರಿಗೆ ತಿಳಿಸಿದ್ದಾರೆ. ಈ ಘಟನೆ ಬಾಂದ್ರಾದಲ್ಲಿರುವ ಬಾಬಾ ಸಿದ್ದಿಕ್ ಅವರ ಪುತ್ರ ಹಾಗೂ ಮಹಾರಾಷ್ಟ್ರ ಶಾಸಕ ಜೀಶನ್ ಸಿದ್ದಿಕ್ ಅವರ ಕಚೇರಿಯ ಹೊರಗಡೆ ಶನಿವಾರ ರಾತ್ರಿ 9.30ರ ಸುಮಾರಿಗೆ ನಡೆದಿದೆ. ದಸರಾ ಹಿನ್ನೆಲೆಯಲ್ಲಿ ಸಿದ್ದಿಕ್ ಅವರು ಪಟಾಕಿ ಸಿಡಿಸುತ್ತಿದ್ದರು. ಈ ವೇಳೆ ವಾಹನದಲ್ಲಿ ಬಂದ ಮೂವರು ಮುಸುಕುಧಾರಿಗಳು 9.9 ಎಂಎಂ ಪಿಸ್ತೂಲ್ನಿಂದ ಗುಂಡು ಹಾರಿಸಿದ್ದಾರೆ. ಮೂರು ಸುತ್ತು ಗುಂಡು ಹಾರಿಸಿದ್ದು, ಅದರಲ್ಲಿ ಒಂದು ಗುಂಡು ಸಿದ್ದಿಕಿಯ ಎದೆಗೆ ಬಡಿದು ಸ್ಥಳದಲ್ಲೇ ಕುಸಿದು ಬಿದ್ದರು. ಒಂದು ಗುಂಡು ಬಾಬಾ ಸಿದ್ದಿಕ್ ಅವರ ವಾಹನದ ವಿಂಡ್ ಶೀಲ್ಡ್ ಅನ್ನು ಸೀಳಿದೆ. ಬಾಬಾ ಸಿದ್ದಿಕ್ ಅವರ ಹೊಟ್ಟೆ ಮತ್ತು ಎದೆಗೆ ಗುಂಡು ಹಾರಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ತಕ್ಷಣ ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಬಾಬಾ ಸಿದ್ದಿಕ್ ಕೊನೆಯುಸಿರೆಳೆದಿದ್ದಾರೆ. ಇಬ್ಬರು ಆರೋಪಿಗಳು ನಟೋರಿಯಸ್ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನ ಸದಸ್ಯರು ಎಂದು ವಿಚಾರಣೆ ವೇಳೆ ಹೇಳಿದ್ದಾರೆ.
