ಮುಂಬೈ : 1200 ಎಂಎಂ ಅಳತೆಯ ನೀರಿ ಪೈಪ್ ಲೈನ್ ಒಡೆದ ಪರಿಣಾಮ ರಸ್ತೆ ಮಧ್ಯದಲ್ಲೇ ನೀರಿನ ಕಾರಂಜಿ ಉಂಟಾದ ಘಟನೆ ಮುಂಬೈಯ ಆದರ್ಶ ನಗರ ರಸ್ತೆಯ ಟ್ವಿಂಕಲ್ ಅಪಾರ್ಟ್ಮೆಂಟ್ನ ಮುಂಭಾಗದಲ್ಲಿ ನಡೆದಿದೆ.
ನೀರಿನ ಪೈಪ್ ಸ್ಪೋಟಗೊಂಡ ಕಾರಣ ನೀರು 8 ರಿಂದ 10 ಅಂತಸ್ತಿನ ಪ್ಲಾಟ್ ನ ಮೇಲಿನವರೆಗೆ ಹರಿದಿದೆ. 1200 ಎಂಎಂ ವ್ಯಾಸದ ಪೀಡಿತ ಪೈಪ್ಲೈನ್ ಓಶಿವಾರದ ಇನ್ಫಿನಿಟಿ ಮಾಲ್ ಎದುರು ಇದ್ದು, ಮಧ್ಯಾಹ್ನ 2.45ರ ಸುಮಾರಿಗೆ ಬಿರುಕು ಬಿಟ್ಟಿರುವ ಬಗ್ಗೆ ವರದಿಯಾಗಿದೆ. ಸದ್ಯ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಿಎಂಸಿಯ ಇಂಜಿನಿಯರ್ ಗಳು ನಾಲೆಯ ಸರಬರಾಜನ್ನು ತಡೆಹಿಡಿದು ನೀರು ಸೋರಿಕೆಯನ್ನು ನಿಲ್ಲಿಸಿದ್ದು, ತಕ್ಷಣವೇ ನೀರಿನ ನಾಲೆಯ ದುರಸ್ತಿ ಕಾರ್ಯವನ್ನು ಪ್ರಾರಂಭಿಸಿದ್ದಾರೆ.
ಮಿಲ್ಲತ್ ನಗರ, ಎಸ್ವಿಪಿ ನಗರ, ಲೋಖಂಡವಾಲಾ ಪ್ರದೇಶಗಳಿಗೆ ದುರಸ್ತಿ ಪೂರ್ಣಗೊಳ್ಳುವವರೆಗೆ ನೀರು ಸರಬರಾಜು ಮಾಡಲು ಸಾಧ್ಯವಿಲ್ಲ. ಮಿಲ್ಲತ್ ನಗರ ಮತ್ತು ಲೋಖಂಡವಾಲಾ ಎರಡು ವಲಯಗಳಲ್ಲಿ ನೀರು ಪೂರೈಕೆಗೆ ತೊಂದರೆಯಾಗಲಿದೆ ಎಂದು ಹೇಳಲಾಗಿದೆ. ಈಗಾಗಲೇ ದುರಸ್ತಿ ಕಾರ್ಯ ಆರಂಭವಾಗಿದ್ದು, ಪೂರ್ಣಗೊಂಡ ತಕ್ಷಣ ನೀರು ಸರಬರಾಜು ಮಾಡಲಾಗುವುದು. ನೀರಿನ ಪೈಪ್ ಲೈನ್ ಸ್ಫೋಟಕ್ಕೆ ನಿಖರವಾದ ಕಾರಣ ಇನ್ನು ತಿಳಿದು ಬಂದಿಲ್ಲ. ಆದರೆ ಹೈಡ್ರಾಲಿಕ್ ವಿಭಾಗದ ನಾಗರಿಕ ಅಧಿಕಾರಿಯೊಬ್ಬರ ಮಾಹತಿ ಪ್ರಕಾರ ಬಹಳ ಹಳೆಯ ಪೈಪ್ ಲೈನ್ ಆಗಿದ್ದು, ಸ್ಪೋಟಗೊಂಡಿರುವ ಸಾಧ್ಯತೆ ಇದೆ ಎನ್ನಲಾಗಿದೆ.
 
				 
         
         
         
															 
                     
                     
                    


































 
    
    
        