ಮುಂಬೈ : ಲೋಕಸಭೆ ಚುನಾವಣೆಯ ಕೊನೆಯ ಹಂತದ ಮತದಾನವು ಜೂನ್ 1ರಂದು ನಡೆಯಲಿದ್ದು, ಜೂನ್ 4ರಂದು ಫಲಿತಾಂಶ ಪ್ರಕಟವಾಗಲಿದೆ. ಹಾಗಾಗಿ, ಎಲ್ಲರ ಗಮನವೀಗ ಚುನಾವಣೆ ಫಲಿತಾಂಶದ ಮೇಲಿದೆ. ಇದರ ಮಧ್ಯೆಯೇ, ಲೋಕಸಭೆ ಚುನಾವಣೆ ಫಲಿತಾಂಶದ ಕುರಿತು ಮುಂಬೈ ಸಟ್ಟಾ ಬಜಾರ್ ವರದಿ ಪ್ರಕಟಿಸಿದ್ದು, ಮೋದಿ ಹ್ಯಾಟ್ರಿಕ್ ಬಾರಿಸುವುದು ನಿಶ್ಚಿತ ಎಂದು ತಿಳಿಸಿದೆ. ಮುಂಬೈ ಸಟ್ಟಾ ಬಜಾರ್ ವರದಿ ಪ್ರಕಾರ, ಚುನಾವಣೆಯಲ್ಲಿ ಬಿಜೆಪಿಯು 295-305 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ತಿಳಿದುಬಂದಿದೆ. ಕಾಂಗ್ರೆಸ್ ಈ ಬಾರಿ 55-65 ಕ್ಷೇತ್ರಗಳಲ್ಲಿ ಮಾತ್ರ ಜಯಿಸಲಿದೆ. ಇನ್ನು, ರಾಮಮಂದಿರ ಕಾರಣದಿಂದ ಬಿಜೆಪಿಗೆ ಪ್ರಮುಖವಾಗಿರುವ ಉತ್ತರ ಪ್ರದೇಶದಲ್ಲಿ ಬಿಜೆಪಿಗೆ 64-66 ಕ್ಷೇತ್ರಗಳು ಲಭಿಸಲಿವೆ ಎಂದು ವರದಿ ತಿಳಿಸಿದೆ. ಇದಕ್ಕೂ ಮೊದಲು ಮುಂಬೈ ಸಟ್ಟಾ ಬಜಾರ್ ಸಮೀಕ್ಷೆಯು ಬಿಜೆಪಿ 270-280 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದಿದ್ದರೆ, ಕಾಂಗ್ರೆಸ್ 70-80 ಕ್ಷೇತ್ರಗಳಲ್ಲಿ ಜಯಿಸಲಿದೆ ಎಂದು ತಿಳಿಸಿತ್ತು. ಫಲೋಡಿ ಸಟ್ಟಾ ಬಜಾರ್ ಕೂಡ ಲೋಕಸಭೆ ಚುನಾವಣೆ ಕುರಿತು ಹಲವು ಸಮೀಕ್ಷೆ ವರದಿಗಳನ್ನು ನೀಡಿದೆ. ಬಿಜೆಪಿಯೊಂದೇ 304-306 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ. ಇನ್ನು ಎನ್‌ಡಿಎ ಮೈತ್ರಿಕೂಟವು ಸುಲಭವಾಗಿ 325-330 ಕ್ಷೇತ್ರಗಳಲ್ಲಿ ಜಯಿಸಲಿದೆ. ಮತ್ತೊಂದೆಡೆ ಕಾಂಗ್ರೆಸ್ ಪಕ್ಷವು 60-62 ಕ್ಷೇತ್ರಗಳಲ್ಲಿ ಜಯಿಸಲಿದೆ ಎಂಬುದಾಗಿ ಸಮೀಕ್ಷಾ ವರದಿ ತಿಳಿಸಿದೆ. ಹಾಗಾಗಿ, ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರವೇ ಸತತ ಮೂರನೇ ಬಾರಿಗೆ ಅಧಿಕಾರಕ್ಕೆ ಬರಲಿದೆ ಎಂಬುದು ವರದಿಯ ಸಾರಾಂಶವಾಗಿದೆ.
