ಕಠ್ಮಂಡು: ಐವರು ಮೆಕ್ಸಿಕನ್ನರು ಸೇರಿದಂತೆ ಆರು ಜನರನ್ನು ಹೊತ್ತ ಹೆಲಿಕಾಪ್ಟರ್ ಮಂಗಳವಾರ ನೇಪಾಳದ ಮೌಂಟ್ ಎವರೆಸ್ಟ್ ಬಳಿಯ ಲಾಮ್ಜುರಾದಲ್ಲಿ ಪತನಗೊಂಡಿದೆ.
ಹಾರಾಟ ಆರಂಭಿಸಿದ 15 ನಿಮಿಷಗಳ ನಂತರ ಸಂಪರ್ಕ ಕಳೆದುಕೊಂಡ ಹೆಲಿಕಾಪ್ಟರ್, ಮೌಂಟ್ ಎವರೆಸ್ಟ್ ಮತ್ತು ಇತರ ಎತ್ತರದ ಪರ್ವತ ಶಿಖರಗಳ ನೆಲೆಯಾದ ಸೊಲುಖುನ್ವು ಜಿಲ್ಲೆಯ ಸುರ್ಕೆಯಿಂದ ಬರುತ್ತಿತ್ತು. ಖಾಸಗಿ ವಾಣಿಜ್ಯ ಹೆಲಿಕಾಪ್ಟರ್ ವಿದೇಶಿ ಪ್ರವಾಸಿಗರನ್ನು ಮೌಂಟ್ ಎವರೆಸ್ಟ್ ಪ್ರವಾಸಕ್ಕೆ ಕರೆದೊಯ್ದು, ಕಠ್ಮಂಡುವಿಗೆ ಹಿಂತಿರುಗುತ್ತಿದ್ದಾಗ ಬೆಳಗ್ಗೆ 10:15ಕ್ಕೆ ನಿಯಂತ್ರಣ ಗೋಪುರದ ಸಂಪರ್ಕ ಕಳೆದುಕೊಂಡಿತು ಎಂದು ಕಠ್ಮಂಡು ಪೋಸ್ಟ್ ವರದಿ ಮಾಡಿದೆ. ಭಾಕಂಜೆ ಗ್ರಾಮದ ಲಾಮಜೂರದ ಚಿಹಾಂದಂಡ ಎಂಬಲ್ಲಿ ಹೆಲಿಕಾಪ್ಟರ್ನ ಅವಶೇಷಗಳು ಪತ್ತೆಯಾಗಿವೆ.
 
				 
         
         
         
															 
                     
                     
                     
                     
                    


































 
    
    
        