ಮಂಡ್ಯ : ಜಿಲ್ಲೆಯಲ್ಲಿ ಬಿಜೆಪಿ ಸಂಘಟನೆ ಚೆನ್ನಾಗಿದೆ. ಬಿಜೆಪಿಗೆ ಮಂಡ್ಯ ಉಳಿಸಿಕೊಂಡರೆ ಪಕ್ಷ ಕಟ್ಟಲು ಸಹಕಾರಿಯಾಗಿದ್ದು, ನಾನು ಯಾವತ್ತೂ ನನಗಾಗಿ ಟಿಕೆಟ್ ಕೊಡಿ ಎಂದು ಲಾಬಿ ಮಾಡಿಲ್ಲ ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಪಕ್ಷ ಸೇರ್ಪಡೆಗೆ ತಾಂತ್ರಿಕವಾಗಿ ಅಡ್ಡಿಯಾಗಿದೆ. ಆ ಕಾರಣಕ್ಕಾಗಿ ನಾನು ಬಾಹ್ಯ ಬೆಂಬಲ ನೀಡಿದ್ದು, ಇದು ಬಿಜೆಪಿ ರಾಷ್ಟ್ರೀಯ ನಾಯಕರೆ ನನಗೆ ಹೇಳಿದ್ದಾರೆ. ನಾನು ಮೋದಿ ಹಾಗೂ ಜೆ.ಪಿ.ನಡ್ಡಾ ಅವರನ್ನು ಭೇಟಿಯಾದಾಗಲೂ ಮಂಡ್ಯದಲ್ಲಿ ಪಕ್ಷ ಸಂಘಟನೆ ಬಗ್ಗೆ ಮಾತನಾಡಿದ್ದೇನೆ. ಬಿಜೆಪಿಯೇ ಮಂಡ್ಯ ಟಿಕೆಟ್ ಉಳಿಸಿಕೊಳ್ಳಬೇಕು ಎಂದು ಕೇಳಿದ್ದಾರೆ.
ಯಾವ ಕಾರಣಕ್ಕೂ ಮಂಡ್ಯ ರಾಜಕಾರಣದಿಂದ ದೂರ ಸರಿಯುವುದು ಸಾಧ್ಯವಿಲ್ಲ, ಅಂದರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಎನ್ ಡಿಎ ಅಭ್ಯರ್ಥಿಯಾಗಿ ಟಿಕೆಟ್ ಸಿಗದೆ ಹೋದರು ಅಲ್ಲಿಂದಲೇ ಸ್ಪರ್ಧಿಸಲು ತಮಗೆ ಬೇರೆ ಆಯ್ಕೆಗಳಿವೆ ಎಂದು ಹೇಳಿದರು.
ಕಾಂಗ್ರೆಸ್‌ಗೆ ಯಾರು ಆಹ್ವಾನ ಕೊಟ್ಟರು ಹೇಳಲಿ ಎಂದು ಚಲುವರಾಯಸ್ವಾಮಿ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಕಾಂಗ್ರೆಸ್‌ನಲ್ಲಿ 25 ವರ್ಷ ಅಂಬರೀಶ್ ಇದ್ದರು. ಪರಿಚಯಸ್ಥರು ಇರುವ ಪಕ್ಷ ಅದು ಯಾವುದಾದರೂ ಕಾರ್ಯಕ್ರಮಗಳಲ್ಲಿ ಸಿಕ್ಕಾಗ ಪಕ್ಷಕ್ಕೆ ಕರೆದಿದ್ದಾರೆ. ಆದರೆ ಅದನ್ನ ಅಧಿಕೃತ ಆಹ್ವಾನ ಎನ್ನಲು ಆಗಲ್ಲ. ಚಲುವರಾಯಸ್ವಾಮಿ ನನ್ನನ್ನು ವೈಯಕ್ತಿಕವಾಗಿ ಕೇಳಿದ್ರೆ ನಾನು ಹೇಳ್ತೀನಿ. ಆದರೆ ಕರೆದವರ ಹೆಸರು ಬಹಿರಂಗ ಮಾಡಿ ಮುಜುಗರ ಮಾಡಲ್ಲ ಎಂದು ಹೇಳಿದರು.
ಯಾವುದೇ ನಿರೀಕ್ಷೆಗಳಿಲ್ಲದೆ ರಾಜಕೀಯಕ್ಕೆ ಬಂದವಳು ನಾನು ಜನರ ಒತ್ತಾಯದ ಮೇರೆಗೆ ರಾಜಕೀಯಕ್ಕೆ ಬಂದೆ. ಅಂಬರೀಶ್ ಅವರ ಮೇಲಿನ ಜನರ ಅಭಿಮಾನ ನನ್ನ ರಾಜಕೀಯಕ್ಕೆ ಕರೆದುಕೊಂಡು ಬಂತು. ನನ್ನ ಗಮನಕ್ಕೆ ಬಂದ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಿದ್ದೇನೆ ನನ್ನ ಕೈಲಾದಷ್ಟು ಪ್ರಯತ್ನ ಮಾಡಿದ್ದೇನೆ. ನನ್ನ ಸ್ಪರ್ಧೆ ಬಗ್ಗೆ ಕನ್ಫರ್ಮ್ ಮಾಡಬೇಕಿರುವುದು ಜನ, ಪಕ್ಷ. ನಾನು ನನ್ನ ನಿಲುವು ತಿಳಿಸಿದ್ದೇನೆ ಅಷ್ಟೇ ಎಂದರು.