ಬೆಂಗಳೂರು: ರಾಹುಲ್ ಗಾಂಧಿ ಯವರು ವಿಪಕ್ಷ ನಾಯಕ ಸ್ಥಾನದ ಜವಾಬ್ದಾರಿಯನ್ನು ವಹಿಸಿಕೊಂಡಿರುವುದು ದೇಶದ ಹಿತದೃಷ್ಟಿಯಿಂದ ಒಳ್ಳೆಯದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.
ಅವರು ಇಂದು ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಬಿಜೆಪಿ ಹಾಗೂ ನರೇಂದ್ರ ಮೋದಿ ಯವರನ್ನು ಎದುರಿಸಲು ರಾಹುಲ್ ಗಾಂಧಿ ಸೂಕ್ತ ವ್ಯಕ್ತಿ.
ರಾಹುಲ್ ಗಾಂಧಿಯವರು ಲೋಕಸಭಾ ವಿರೋಧ ಪಕ್ಷದ ಸ್ಥಾನವನ್ನು ಸ್ವೀಕರಿಸಬೇಕೆಂದು ನಾನು ಕೂಡ ಸಲಹೆ ನೀಡಿದ್ದೆ. ಬಿಜೆಪಿ ಹಾಗೂ ನರೇಂದ್ರ ಮೋದಿ ಯವರನ್ನು ಎದುರಿಸಬೇಕಾದರೆ ನೀವೇ ವಿರೋಧಪಕ್ಷದ ನಾಯಕರಾಗಬೇಕೆಂದು ಕಾರ್ಯಕಾರಿಣಿ ಸಮಿತಿ ಹಾಗೂ ನಾನೂ ಒತ್ತಾಯ ಮಾಡಿದ್ದೆ. ರಾಹುಲ್ ಗಾಂಧಿ ಯವರು ಈ ಜವಾಬ್ದಾರಿಯನ್ನು ವಹಿಸಿಕೊಂಡಿರುವುದು ದೇಶದ ಹಿತದೃಷ್ಟಿಯಿಂದ ಒಳ್ಳೆಯದು. ನಾನು ಅವರಿಗೆ ತುಂಬಿ ಹೃದಯದ ಅಭಿನಂದನೆಗಳನ್ನು ತಿಳಿಸಬಯಸುತ್ತೇನೆ ಎಂದು ತಿಳಿಸಿದರು.
ಹಾಲಿನ ಉತ್ಪಾದನೆ 99 ಲಕ್ಷಕ್ಕಿಂತ ಹೆಚ್ಚಾಗಿದೆ:
ಹಾಲಿನ ದರ ಹೆಚ್ಚಾಗಿಲ್ಲ. ಕಳೆದ ವರ್ಷ ಇದೇ ವೇಳೆಗೆ ಹಾಲಿನ ಉತ್ಪಾದನೆ 90 ಲಕ್ಷ ಲೀಟರ್ ಇತ್ತು. ಈಗ 99 ಲಕ್ಷಕ್ಕಿಂತ ಹೆಚ್ಚಾಗಿದೆ. ರೈತರಿಂದ ನಾವು ಹಾಲು ಪಡೆಯಬೇಕಾಗಿದ್ದು, ಅದನ್ನು ಮಾರಾಟ ಮಾಡಬೇಕಿದೆ. ಅರ್ಧ ಲೀಟರ್ ಪ್ಯಾಕೆಟ್ ನಲ್ಲಿ 50 ಮೀ.ಲೀ ಹೆಚ್ಚು ಮಾಡಿದ್ದು, ಅದಕ್ಕೆ ತಗುಲುವ 2.10 ರೂ.ಗಳನ್ನು ಪ್ರಮಾಣಕ್ಕೆ ತಕ್ಕಂತೆ ಬೆಲೆ ನಿಗದಿ ಮಾಡಲಾಗಿದೆ ಎಂದು ಪುನರುಚ್ಚರಿಸಿದರು.
ಮಾರುಕಟ್ಟೆ ಅಗತ್ಯವಿದೆ. ಹಾಲಿನ ಬೆಲೆ ಹೆಚ್ಚು ಮಾಡಿಲ್ಲ. ಹಾಲು ಹೆಚ್ಚು ಉತ್ಪಾದನೆಯಾಗಿರುವುದನ್ನು ಹೆಚ್ಚು ನೀಡಿ ಅದಕ್ಕೆ ತಕ್ಕದರವನ್ನಷ್ಟೇ ನಿಗದಿ ಮಾಡಲಾಗಿದೆ ಎಂದರು.
ಹಾಲಿನ ದರ ಏರಿಕೆಯಾಗಿಲ್ಲ: ಕಾಫಿ ಟೀ ದರಗಳ ಹೆಚ್ಚಳ ಸಲ್ಲದು:
ಹೊಟೇಲ್ ಮಾಲೀಕರ ಸಂಘದವರು ಸಭೆ ಸೇರಿ ಕಾಫಿ ಟೀ ದರಗಳನ್ನು ಹೆಚ್ಚಿಸಲಾಗುವುದು ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ ಹೇಗೆ ಹೆಚ್ಚಿಸುತ್ತಾರೆ ಹಾಲಿನ ಬೆಲೆ ಏರಿದ್ದರೆ ಮಾತ್ರ ಹೆಚ್ಚಿಸಬೇಕು ಎಂದರು.
ರೈತರಿಂದ ಹಾಲು ಕೊಳ್ಳಬೇಕು:
ಹೆಚ್ಚಾಗಿ ಉತ್ಪಾದನೆಯಾಗಿರುವ ಹಾಲನ್ನು ರೈತರಿಂದ ಕೊಳ್ಳಬೇಕೆ ಹೊರತು ಚೆಲ್ಲಲಾಗುವುದಿಲ್ಲ. ಕೊಳ್ಳುವವವರಿಗೆ ಹಾಲು ಹೆಚ್ಚಾಗಿ ದೊರೆಯುತ್ತಿದ್ದು ಜನ ಹಾಲನ್ನು ಕೊಳ್ಳಬೇಕು ಎಂದರು.
ಸಂಸದರ ಸಭೆಗೆ ದೆಹಲಿಗೆ ತೆರಳುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ ಹೋಗುವಾಗ ಹೇಳುತ್ತೇನೆ ಎಂದರು.