ಬೆಂಗಳೂರು:ರಾಹುಲ್ ಗಾಂಧಿಯವರು ಹಿಂದೂಗಳ ಕ್ಷಮೆ ಕೇಳಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ಆಗ್ರಹಿಸಿದರು.
ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರದಲ್ಲಿ ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿ ಈ ದೇಶವನ್ನು ಮುನ್ನಡೆಸುತ್ತಿದೆ. ಮತ್ತೊಂದು ಕಡೆ ಸತತ 3 ಬಾರಿ ಹೇಗಾದರೂ ಮಾಡಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಪ್ರಯತ್ನಿಸಿ ಕಾಂಗ್ರೆಸ್ ಪಕ್ಷ, ಅದರ ನಾಯಕ ರಾಹುಲ್ ಗಾಂಧಿಯವರು ಸಂಪೂರ್ಣವಾಗಿ ವಿಫಲವಾಗಿದ್ದಾರೆ. ವಿಪಕ್ಷ ನಾಯಕನ ಸ್ಥಾನ ಜವಾಬ್ದಾರಿ ಅವರಿಗೆ ಮೊದಲ ಬಾರಿಗೆ ಲಭಿಸಿದೆ. ನಿನ್ನೆ ಸಂಸತ್ತಿನಲ್ಲಿ ರಾಹುಲ್ ಗಾಂಧಿಯವರು ವಿಪಕ್ಷ ನಾಯಕನಾಗಿ ಮಾಡಿದ ಚೊಚ್ಚಲ ಭಾಷಣ ಸುಳ್ಳು, ನಿರಾಶೆ, ಆಧಾರರಹಿತ ಆರೋಪಗಳಿಂದ ಕೂಡಿತ್ತು ಎಂದು ಆಕ್ಷೇಪಿಸಿದರು.
ಸದನದಲ್ಲಿ ರಾಹುಲ್ ಗಾಂಧಿಯವರ ನಡವಳಿಕೆ ಸಂಸತ್ತಿನ ನಿಯಮಗಳಿಗೆ ಧಕ್ಕೆ ತರುವಂತಿತ್ತು ಎಂದು ಟೀಕಿಸಿದರು. ಅವರು ಲೋಕಸಭಾ ಚುನಾವಣೆ ಸಂದರ್ಭದಲ್ಲೂ ಸುಳ್ಳನ್ನೇ ಹತ್ತಾರು ಬಾರಿ ಹೇಳಿಕೊಂಡು ದೇಶಾದ್ಯಂತ ಪ್ರವಾಸ ಮಾಡಿದ್ದರು. ಈಗ ವಿಪಕ್ಷ ನಾಯಕನಾಗಿ ಹಳೇ ಚಾಳಿ ಮುಂದುವರೆಸಿದ್ದಾರೆ.
ಸಂಸದರೂ ಆದ ಅವರು ತಮ್ಮ ಸ್ಥಾನದ ಘನತೆ ಎತ್ತಿ ಹಿಡಿಯುವ ಬದಲಾಗಿ ಆ ಸ್ಥಾನಕ್ಕೆ ಧಕ್ಕೆ ತರುವ ಕೆಲಸ ಮಾಡಿದ್ದಾರೆ ಎಂದು ವಿಶ್ಲೇಷಿಸಿದರು.ನಿನ್ನೆ ಅವರು ತಮ್ಮ ಭಾಷಣದಲ್ಲಿ ಹಿಂದೂಗಳು ಹಿಂಸಾಚಾರ ಮತ್ತು ದ್ವೇಷದಲ್ಲಿ ಹಗಲಿರುಳು ನಿರತರು ಎಂಬ ಮಾತನ್ನು ಉಲ್ಲೇಖಿಸಿದ್ದಾರೆ. ಈ ಮಾತನ್ನು ಹೇಳುವ ಮೂಲಕ ವಿಪಕ್ಷ ನಾಯಕ ರಾಹುಲ್ ಗಾಂಧಿಯವರು ಈ ದೇಶದ ಅಸಂಖ್ಯಾತ ಹಿಂದೂಗಳಿಗೆ ಅವಮಾನ ಮಾಡಿದ್ದಾರೆ. ಹಿಂದೂಗಳ ತೇಜೋವಧೆ ಮಾಡಿದ್ದಾರೆ. ಅಷ್ಟೇ ಸಾಲದೆಂದು ಅಗ್ನಿವೀರ್, ರೈತರ ಬಗ್ಗೆ, ಅಯೋಧ್ಯೆ ವಿಚಾರ ಮಾತ್ರವಲ್ಲದೆ, ಮೈಕ್ರೋಫೋನ್ ಬಗ್ಗೆ ಮಾತನಾಡಿದ್ದಾರೆ. ಇವೆಲ್ಲ ವಿಚಾರಗಳಲ್ಲಿ ಸುಳ್ಳು ಹೇಳಿಕೆ ನೀಡಿದ್ದಲ್ಲದೆ, ಹಿಂದೂಗಳ ತೇಜೋವಧೆ ಮಾಡಿದ್ದು ಅಕ್ಷಮ್ಯ ಅಪರಾಧ ಎಂದು ಖಂಡಿಸಿದರು.
ಮೋದಿಜೀ ಅವರ ಸರಕಾರ ದೇಶದ ರೈತರನ್ನು ಭಯೋತ್ಪಾದಕರ ಪಟ್ಟಿಗೆ ಸೇರಿಸಿದೆ ಎಂದು ಆರೋಪಿಸಿದ್ದು, ಇದು ಸರಿಯಲ್ಲ. ಪುರಾವೆ ಕೇಳಿದಾಗ ಅವರು ಬಾಯಿ ಮುಚ್ಚಿ ಕೂತಿದ್ದನ್ನು ಗಮನಿಸಿದ್ದೀರಿ ಎಂದು ನುಡಿದರು.ಇದಿಷ್ಟೇ ಅಲ್ಲ; ಸ್ಪೀಕರ್ ಹುದ್ದೆಗೂ ಅವಮಾನ ಮಾಡಿದ್ದಾರೆ. ರಾಹುಲ್ ಗಾಂಧಿಯವರ ಬೇಜವಾಬ್ದಾರಿ ನಡವಳಿಕೆ ಅಕ್ಷಮ್ಯ ಅಪರಾಧ ಎಂದು ಆಕ್ಷೇಪಿಸಿದರು. ತಕ್ಷಣ ಅವರು ದೇಶದ ಜನರ ಕ್ಷಮೆ ಕೇಳಬೇಕೆಂದು ಒತ್ತಾಯಿಸಿದರು.
ರಾಹುಲ್ ಅವರು ಪ್ರಬುದ್ಧತೆಯಿಂದ ನಡೆದುಕೊಳ್ಳುವಂತೆ ಹಿರಿಯ ಕಾಂಗ್ರೆಸ್ಸಿಗರು ಮಾರ್ಗದರ್ಶನ ಮಾಡಬೇಕೆಂದು ಸಲಹೆ ನೀಡಿದರು.ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ, ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ, ಬೆಂಗಳೂರು ಉತ್ತರ ಜಿಲ್ಲಾ ಅಧ್ಯಕ್ಷ ಎಸ್.ಹರೀಶ್ ಅವರು ಭಾಗವಹಿಸಿದ್ದರು.