ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಹಾಗೂ ಪವಿತ್ರಾ ಗೌಡ ಸೇರಿದಂತೆ ಹದಿನೈದಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದ್ದು, ಆರೋಪಿಗಳನ್ನು ತೀವ್ರ ವಿಚಾರಣೆಗಳಪಡಿಸಲಾಗುತ್ತಿದೆ.
ಕೊಲೆ ಪ್ರಕರಣ ದಿನದಿಂದ ದಿನಕ್ಕೆ ಹೊಸ ಟ್ವಿಸ್ಟ್ ಪಡೆದುಕೊಳ್ಳುತ್ತಿದ್ದು, ಕನ್ನಡ ಚಿತ್ರರಂಗದ ಮತ್ತೊಬ್ಬ ನಟನಿಗೆ ಪೊಲೀಸರು ನೋಟಿಸ್ ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ. ಪ್ರಕರಣದ ತನಿಖೆ ಸಲುವಾಗಿ ಹಾಸ್ಯ ನಟರೊಬ್ಬರನ್ನು ಪೊಲೀಸರು ವಿಚಾರಣೆ ನಡೆಸುವ ಸಾಧ್ಯತೆ ಹೆಚ್ಚಾಗಿದೆ.
ರೇಣುಕಾಸ್ವಾಮಿ ಕೊಲೆಯಾದ ದಿನ ನಟ ದರ್ಶನ್ ಹಾಗೂ ಇತರರು ಶನಿವಾರ ಮಧ್ಯಾಹ್ನದಿಂದ ವಿನಯ್ ಒಡೆತನದ ಸ್ಟೋನಿಬ್ರೂಕ್‌ನಲ್ಲಿ ಪಾರ್ಟಿ ಮಾಡಿದ್ದರು. ಈ ವೇಳೆ ದರ್ಶನ್ ಜೊತೆ ಈ ಹಾಸ್ಯ ನಟ ಕೂಡ ಭಾಗಿಯಾಗಿದ್ದರು. ಪಾರ್ಟಿ ಆಗುತ್ತಿದ್ದಂತೆ ದರ್ಶನ್ ಸಂಜೆ ವೇಳೆಗೆ ಸ್ವಲ್ಪ ಕೆಲಸ ಇದೆ ಎಂದು ಹೇಳಿ ಎದ್ದು ಹೊರಟು ಹೋಗಿದ್ದಾರೆ ಎನ್ನಲಾಗಿದೆ.
ಇದೀಗ ನಟ ದರ್ಶನ್ ಬಂಧನವಾಗಿ ವಿಚಾರಣೆ ತೀವ್ರಗೊಂಡಿದ್ದು, ಸ್ಟಾರ್ ಹಾಸ್ಯ ನಟನ ಎದೆಯಲ್ಲಿ ಢವ ಢವ ಜೋರಾಗಿದೆ. ಯಾವುದೇ ಕ್ಷಣದಲ್ಲಾದರೂ ಪೊಲೀಸರು ನಟನನ್ನು ಸಂಪರ್ಕಿಸುವ ಸಾಧ್ಯತೆ ಇದೆ. ನಾಳೆ ವಿಚಾರಣೆಗೆ ಹಾಜರಾಗುವಂತೆ ಪಶ್ಚಿಮ ವಿಭಾಗ ಪೊಲೀಸರು ಹಾಸ್ಯ ನಟನಿಗೆ ನೋಟಿಸ್ ನೀಡಲಿದ್ದು, ಎಪಿ ನಗರ ಠಾಣೆಗೆ ಹಾಜರಾಗುವಂತೆ ಇಂದು ಸಂಜೆ ನೋಟಿಸ್ ನೀಡಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ.
ದರ್ಶನ್ ಪಟ್ಟಣಗೆರೆ ಶೆಡ್‌ಗೆ ಹೋಗುವ ಕೆಲವೇ ಗಂಟೆ ಮುಂಚಿತವಾಗಿ ಪಾರ್ಟಿ ನಡೆದಿದ್ದು, ಈ ಪಾರ್ಟಿಯಲ್ಲಿ ಹಾಸ್ಯ ನಟ ಸೇರಿ ನಿರ್ಮಾಪಕರು ಕೂಡ ಭಾಗಿ ಆಗಿದ್ದರು ಎನ್ನಲಾಗಿದೆ. ಪಾರ್ಟಿಯಿಂದ ಎದ್ದು ಮನೆಗೆ ಹೊರಟಿದ್ದ ನಟ ದರ್ಶನ್, ಮನೆಯಿಂದ ನೇರವಾಗಿ ಪಟ್ಟಣಗೆರೆ ಶೆಡ್‌ಗೆ ಆಗಮಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಕೊಲೆ ವಿಚಾರವಾಗಿ ಸ್ಟೋನಿ ಬ್ರೂಕ್ ಪಬ್‌ನ ಪಾರ್ಟಿಯಲ್ಲಿ ಏನಾದರೂ ಚರ್ಚೆಯಾಗಿತ್ತಾ ಎನ್ನುವ ಬಗ್ಗೆ ಪೊಲೀಸರು ವಿಚಾರಣೆ ನಡೆಸುವ ಸಾಧ್ಯತೆ ಇದೆ.