ವಚನ ಸಂವಿಧಾನ ಹೇಳಿದ್ದು ಧರ್ಮದ ಮೂಲ ಭಯವಲ್ಲ; ದಯೆ: ಸಾಣೇಹಳ್ಳಿಯ ಶ್ರೀ

WhatsApp
Telegram
Facebook
Twitter
LinkedIn

 

ತುಮಕೂರು:  ಧರ್ಮದ ಮೂಲ ಭಯ ಎನ್ನುವ ವಾತಾವರಣವನ್ನು ಸಂಪ್ರದಾಯಬದ್ಧ, ವೈದಿಕ ಪರಂಪರೆಯವರು ಜಾರಿಯಲ್ಲಿ ತಂದಿದ್ದರು. ಧರ್ಮದ ಹೆಸರಿನಲ್ಲಿ ಮಾಡುವ “ಹಿಂಸೆ ಹಿಂಸೆಯಲ್ಲ ಎನ್ನುವ ಭ್ರಮೆಯನ್ನು ಜನರ ಮನದಲ್ಲಿ ಬಿತ್ತಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದರು. ಅವರು ಕಾನೂನನ್ನು ತಮ್ಮ ಕಪಿಮುಷ್ಠಿಯಲ್ಲಿ ಇಟ್ಟುಕೊಳ್ಳುವ ಪ್ರವೀಣರಾಗಿದ್ದರು. ಅಂಥ ಸಂದರ್ಭದಲ್ಲಿ ವಚನ ಸಂವಿಧಾನ ಹೇಳಿದ್ದು ಧರ್ಮದ ಮೂಲ ಭಯವಲ್ಲ; ದಯೆ ಎಂದು ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರು ಹೇಳಿದರು.

ತುಮಕೂರಿನ ಸಿದ್ದಗಂಗಾ ಮಠದಲ್ಲಿ ನಡೆದ ಮಠಾಧೀಶರಿಗೆ ವಚನ ಕಮ್ಮಟದಲ್ಲಿ *ಭಾರತ ಸಂವಿಧಾನ : ವಚನ ಸಂವಿಧಾನಕುರಿತಂತೆ ಮಾತನಾಡಿದ ಅವರು, ಸತ್ಯ, ನೀತಿ, ಪ್ರೀತಿ, ಪ್ರಾಮಾಣಿಕತೆ, ಸಹಕಾರ, ಸೌಹಾರ್ದತೆ, ಅಹಿಂಸೆ ಇಂಥ ಜೀವನ ಮೌಲ್ಯಗಳು ಪ್ರತಿಯೊಬ್ಬ ವ್ಯಕ್ತಿಗೂ ಬೇಕು ಎಂದರು.

ರೈತ ಬಂಡಿಯ ಗಾಲಿಗಳು ಅಚ್ಚಿನಿಂದ ಹೊರಹೋಗದಂತೆ ಕೀಲುಗಳನ್ನು ಹಾಕುವುದು ಬಹುಮುಖ್ಯ. ಅಷ್ಟೇ ಮುಖ್ಯವಾದುದು ಈ ಮನುಷ್ಯನ ಒಡಲೆಂಬ ಬಂಡಿಗೆ ಕೀಲುಗಳನ್ನು ಹಾಕುವುದು. ಹಾಗಿದ್ದರೆ ಮಾನವ ದೇಹವೆನ್ನುವ ಬಂಡಿಗೆ ಹಾಕಬೇಕಾದ ಕೀಲುಗಳು ಯಾವವು? ಅವೇ ಶಿವಶರಣರ ನುಡಿಮುತ್ತುಗಳು ಅರ್ಥಾತ್ ವಚನಗಳು. ಆ ವಚನಗಳ ಆಶಯದಂತೆ ಪ್ರತಿಯೊಬ್ಬ ವ್ಯಕ್ತಿಯೂ ನಡೆದುಕೊಂಡರೆ ಮಾನವ ಬದುಕಿನ ಬಂಡಿ ಯಾವುದೇ ಅಡೆತಡೆ ಇಲ್ಲದೆ ಮುಂದೆ ಸಾಗುವುದು. ಆದರ್ಶ ಜೀವನಕ್ಕೆ ಸೋಪಾನವಾಗುವುದು. ನೆಮ್ಮದಿಯ ಜೀವನಕ್ಕೆ ತಳಹದಿಯಾಗಿ ಕಲ್ಯಾಣ ರಾಜ್ಯ ನೆಲೆಗೊಳ್ಳುವುದು.

೧೨ನೆಯ ಶತಮಾನದಲ್ಲಿ ಇಂದಿನ ಬಸವಕಲ್ಯಾಣದಲ್ಲಿ ಬಹುದೊಡ್ಡ ಚಳವಳಿ ನಡೆತು. ಆ ಚಳವಳಿಯ ಮೂಲ ಉದ್ದೇಶ ಧಾರ್ಮಿಕ ನೆಲೆಗಟ್ಟಿನ ಮೇಲೆ ಸಮಸಮಾಜವನ್ನು ಕಟ್ಟುವುದಾಗಿತ್ತು. ಅದಕ್ಕಾಗಿ ಬಸವಣ್ಣನವರು `ಮಹಾಮನೆ’, `ಅನುಭವ ಮಂಟಪ’ ಎನ್ನುವ ಸಂಸ್ಥೆಗಳನ್ನು ಹುಟ್ಟುಹಾಕಿದರು. ಆದರೆ ಸರಿಯಾದ ಅಧ್ಯಯನದ ಕೊರತೆ ಇರುವವರು ಅಥವಾ ವಚನ ಚಳವಳಿಯ ಬಗ್ಗೆ ಭಯಗೊಂಡ ಮತ್ಸರಿಗರು `ಅನುಭವ ಮಂಟಪ, ಮಹಾಮನೆ ಇರಲೇ ಇಲ್ಲ. ವಚನಗಳು ಬರೆದದ್ದಲ್ಲ, ಸೃಷ್ಠಿಸಿದ್ದು. ಬಸವಾದಿ ಶರಣರು ಅಸಮಾನತೆಯ ವಿರುದ್ಧ ಚಳವಳಿಯನ್ನೇ ನಡೆಸಿಲ್ಲ. ಕಲ್ಯಾಣದಲ್ಲಿ ನಡೆದದ್ದು ಕ್ರಾಂತಿಯೇ ಅಲ್ಲ. ಭಾರತದಲ್ಲಿ ಕ್ರಾಂತಿ, ಚಳವಳಿಯ ಶಬ್ದಗಳಿಗೆ ಜಾಗವೇ ಇಲ್ಲ’ ಎಂದೆಲ್ಲ ಅಂದಿನಿಂದ, ಇಂದಿನವರೆಗೆ, ಈಗಲೂ ಹರಟುತ್ತಲೇ ಇದ್ದಾರೆ. ತಮ್ಮ ವಾದವನ್ನು ಸಮರ್ಥಿಸಿಕೊಳ್ಳಲು ಬೇಕಾದ ಪುಸ್ತಕಗಳಬರೆಸುತ್ತಿದ್ದಾರೆ. ವಿವಿಧ ದೃಶ್ಯಮಾಧ್ಯಮಗಳ ಮೂಲಕ ಅಸತ್ಯವನ್ನೇ ಸತ್ಯಮಾಡಲು ಹೆಣಗುತ್ತಿದ್ದಾರೆ. ಅವರ ವಾದ, ಗೊಣಗಾಟ, ಮತ್ಸರ, ಕುಹಕತನ, ಅತೀಬುದ್ಧಿವಂತಿಕೆ ಅವರಿಗೇ ಇರಲಿ. ಅನುಭವ ಮಂಟಪ, ಮಹಾಮನೆ ಕಲ್ಪನೆಗಳಲ್ಲ. ವಚನಗಳು ಅಂದಿನ ಶರಣರ ಜೀವನಾನುಭವದ ಅಣಿಮುತ್ತುಗಳು. ಅಂಥ ವಚನಗಳು ಇದ್ದವು ಎನ್ನುವುದಕ್ಕೆ ಅಂದಿನಿಂದ ಇಂದಿನವರೆಗೂ ಅವು ಉಳಿದು ಬಂದಿರುವುದೇ ಪ್ರತ್ಯಕ್ಷ ಸಾಕ್ಷಿ. ಅಂದು ಕಲ್ಯಾಣದಲ್ಲಿ ಧಾರ್ಮಿಕ, ಸಾಹಿತ್ಯಕ, ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಪರಿವರ್ತನೆಯ ಗಾಳಿ ಬೀಸಿತು ಎನ್ನುವುದನ್ನು ವಚನಗಳೇ ಗಟ್ಟಿಯಾಗಿ ಹೇಳುತ್ತವೆ. ಅನುಭವ ಮಂಟಪದಲ್ಲಿ ಶರಣರೆಲ್ಲ ಸೇರಿ ಪರಸ್ಪರ ಚಿಂತನ ಮಂಥನ ನಡೆಸುತ್ತಿದ್ದರು. ಅವರ ಚಿಂತನ ಮಂಥನದ ಉದ್ದೇಶ ಸುಸ್ಥಿರ ಸಮಾಜವನ್ನು ಕಟ್ಟುವುದಾಗಿತ್ತು. ಅದಕ್ಕಾಗಿ ಬೇಕಾದ ಆದರ್ಶ ರೀತಿ-ನೀತಿ- ನಿಯಮಗಳನ್ನು ರೂಪಿಸಿ ಜಾರಿಯಲ್ಲಿ ತರುವುದಾಗಿತ್ತು.

ಕರ್ನಾಟಕ ಸರ್ಕಾರ ಡಾ. ಎಂ ಎಂ ಕಲಬುರ್ಗಿಯವರ ಸಂಪಾದಕತ್ವದಲ್ಲಿ ಆ ಎಲ್ಲ ವಚನಗಳನ್ನು ಪ್ರಕಟಿಸಿ ಅವು ಎಲ್ಲ ಜನರ ಕೈಗೆ ಸಿಗುವಂತೆ ಮಾಡಿದೆ. ಅದಕ್ಕಾಗಿ ಸರ್ಕಾರ ಅಭಿನಂದನಾರ್ಹ. ಶರಣರ ಆರದ ಬೆಳಕಾಗಿ ನಮ್ಮನ್ನು ಕೈ ಹಿಡಿದು ಮುನ್ನಡೆಸುವ ಶಕ್ತಿ ಹೊಂದಿವೆ. ವಚನಗಳಲ್ಲಿ ಅಡಕವಾಗಿರುವ ಆದರ್ಶ ತತ್ವ ಸಿದ್ಧಾಂತಗಳು ಅಂದಿಗೆ ಮಾತ್ರ ಅಲ್ಲ; ಇಂದಿಗೂ, ಎಂದೆಂದಿಗೂ ಸಲ್ಲುವಂತಹುಗಳಾಗಿವೆ. `ಅನುಭವ ಮಂಟಪ’ ಇಂದಿನ `ಸಂಸತ್’ (ಪಾರ್ಲಿಮೆಂಟ್) ಇದ್ದಹಾಗೆ. ಅಂದಿನ ಏಳನೂರು ಎಪ್ಪತ್ತು ಅಮರ ಗಣಂಗಳು ಇಂದಿನ ಸಂಸತ್ ಸದಸ್ಯರಿದ್ದಂತೆ. ಲಕ್ಷದ ಮೇಲೆ ತೊಂಬತ್ತಾರು ಸಾವಿರ ಶರಣರು ಇದ್ದರೆಂದು ತಿಳಿದುಬರುತ್ತದೆ. ಅವರೇ ಅನುಭವ ಮಂಟಪದ ಅಮರ ಗಣಂಗಳನ್ನು ಆಯ್ಕೆ ಮಾಡುವ ಜವಾಬ್ದಾರಿಯುತ ಮತದಾರರು. ಅಂದು ಅನುಭವ ಮಂಟಪ ಎನ್ನುವ ಸಂಸತ್ತಿನಲ್ಲಿ ಪ್ರಜಾಪ್ರಭುತ್ವದ ಸಿದ್ಧಾಂತಗಳಾದ ಸ್ವಾತಂತ್ರ್ಯ, ಸಮಾನತೆ, ಸಹೋದರತ್ವ ಇತ್ಯಾದಿ ತತ್ವಗಳನ್ನು ಜಾರಿಯಲ್ಲಿ ತರಲಾಗಿತ್ತು.

ಇವತ್ತು ಸಂವಿಧಾನ ಎನ್ನುತ್ತಲೇ ನಮಗೆ ನೆನಪಾಗುವುದು ಡಾ. ಬಿ ಆರ್ ಅಂಬೇಡ್ಕರ್ ಅವರ ಅಧ್ಯಕ್ಷತೆಯಲ್ಲಿ ರಚನೆಯಾದ `ಭಾರತ ಸಂವಿಧಾನ’. ಭಾರತ ಆಂಗ್ಲರ ಆಡಳಿತದಿಂದ ಸ್ವಾತಂತ್ರ್ಯ ಪಡೆದನಂತರ ತನ್ನ ಆಡಳಿತವನ್ನು ಸುಗಮವಾಗಿ ಮುನ್ನಡೆಸಲು ಬೇಕಾದ ನೀತಿ ನಿರೂಪಣೆ ಮಾಡಲು ಪ್ರಾಜ್ಞರ ಒಂದು ಸಮಿತಿಯನ್ನು ರಚಿಸಲಾಯಿತು. ಆ ಸಮಿತಿಯಲ್ಲಿ ವಿವಿಧ ಕ್ಷೇತ್ರದಲ್ಲಿ ಪರಿಣಿತರಾದ ಸ್ತ್ರೀ-ಪುರುಷರು ಸದಸ್ಯರಾಗಿದ್ದರು. ಅಂಥ ಜವಾಬ್ದಾರಿಯುತ ಸಮಿತಿಯ ಅಧ್ಯಕ್ಷತೆಯ ಹೊಣೆ ಹೊತ್ತು ಅದನ್ನು ಸಮರ್ಥವಾಗಿ ನಿಭಾಸಿದವರು ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರು. ಅವರೆಲ್ಲರೂ ಭಾರತಕ್ಕೆ ಬೇಕಾದ ಸಂವಿಧಾನ ರಚನೆ ಮಾಡುವ ಮುನ್ನ ವಿವಿಧ ದೇಶಗಳ ಸಂವಿಧಾನ ಮತ್ತು ಬೇರೆ ಬೇರೆ ಕಡೆ ನಡೆದ ಕ್ರಾಂತಿ, ಮಾನವ ಹಕ್ಕುಗಳ ಪರಿಯನ್ನು ಸಮಗ್ರವಾಗಿ ಅಧ್ಯಯನ ಮಾಡಿದರು. ಆ ಅಧ್ಯಯನದ ಫಲಶೃತಿಯನ್ನು ಲಿಖಿತರೂಪಕ್ಕೆ ಇಳಸಿ ಅದನ್ನೇ ಭಾರತದ ಸಂವಿಧಾನ ಎಂದು ಅಂಗೀಕರಿಸಿದರು. ಪ್ರಜಾಪ್ರಭುತ್ವ ದೇಶದ ಬಹುದೊಡ್ಡ ಸಂವಿಧಾನ ನಮ್ಮದೇ ಆಗಿದೆ. ಅದರಲ್ಲಿ ಕಲ್ಯಾಣ ನಾಡನ್ನು ಕಟ್ಟಲು ಬೇಕಾದ ನೀತಿ, ನಿಯಮ, ಕಾನೂನುಗಳು ಅಡಕವಾಗಿವೆ. ಮುಖ್ಯವಾಗಿ ರಾಜ್ಯಾಂಗ, ನ್ಯಾಯಾಂಗ, ಕಾರ್ಯಾಂಗ, ಹಕ್ಕು ಮತ್ತು ಕರ್ತವ್ಯಗಳ ವಿವರವಾದ ಮಾ”ತಿಯನ್ನು ಭಾರತದ ಸಂವಿಧಾನದಲ್ಲಿ ನೋಡಬಹುದು. ನಮ್ಮ ಸಂವಿಧಾನದ ಪೀಠಿಕೆಯೇ ಸಂವಿಧಾನದ ಮಹತ್ವ, ಅಗತ್ಯ ಮತ್ತು ಹಿರಿಮೆಯನ್ನು ಎತ್ತಿಹಿಡಿಯುವಂತಹುದಾಗಿದೆ.

ಯಾವ ಅಪರಾಧಕ್ಕೆ ಯಾವ ಶಿಕ್ಷೆ ಎಂದು ಸಂವಿಧಾನ, ಭಾರತೀಯ ದಂಡ ಸಂಹಿತೆ (ಇಂಡಿಯನ್ ಪೀನಲ್ ಕೋಡ್) ಹೇಳಿದರೆ ಅದಕ್ಕಿಂತ ಪರಿಣಾಮಕಾರಿಯಾಗಿ ಬಸವಣ್ಣನವರು ಈ ವಚನದಲ್ಲಿ ಹೇಳಿದ್ದಾರೆ. ಮನುಷ್ಯನ ಮೂಲ ಆಶಯ ದೇವರ ಒಲುಮೆ ಪಡೆಯಬೇಕು ಎನ್ನುವುದು. ಹಾಗೆ ಒಲುಮೆ ಪಡೆಯಲು ಬೇಕಾಗಿದ್ದು ಅಂತರಂಗ ಮತ್ತು ಬಹಿರಂಗ ಶುದ್ಧಿ. ಈ ಶುದ್ಧಿಗಾಗಿ ಕೆಲವರು ಸ್ನಾನ, ಧ್ಯಾನ ವಿಚಾರ ಹೇಳಬಹುದು. ಬಸವಣ್ಣನವರು ಅವುಗಳ ವಿಚಾರವನ್ನೇ ಇಲ್ಲಿ ಪ್ರಸ್ತಾಪಿಸಿಲ್ಲ. ಬದಲಾಗಿ ಏಳು ಶೀಲ ಅಂದರೆ ನಡಾವಳಿಕೆಗಳನ್ನು, ನೀತಿ ಸಂಹಿತೆಗಳನ್ನು ಹೇಳಿದ್ದಾರೆ. ದೇವರು ಒಲಿಯಬೇಕು ಎಂದರೆ ದೈಹಿಕ, ಮಾನಸಿಕ ಮತ್ತು ಬೌದ್ಧಿಕವಾಗಿಯೂ ಕಳವು, ಕೊಲೆ, ಸುಳ್ಳು ಇತ್ಯಾದಿ ನಡೆಯಬಾರದು. ಅಷ್ಟೇ ಅಲ್ಲ; ಇತರರ ಮೇಲೆ ವಿನಾಕಾರಣ ಸಿಟ್ಟಿಗೇಳುವುದು, ಅಸಹ್ಯಪಡುವುದು, ತನ್ನನ್ನೇ ಹೊಗಳಿಕೊಳ್ಳುವುದು, ಇತರರನ್ನು ನಿಂದಿಸುವುದು ಇಂತಹ ಪಾಪದ ಕಾರ್ಯಗಳಿಂದಲೂ ದೂರವಿರಬೇಕು ಎನ್ನುವ ಎಚ್ಚರಿಕೆಯನ್ನು ಧಾರ್ಮಿಕ, ನೈತಿಕ ನೆಲೆಯಲ್ಲಿ ವಚನ ಸಂವಿಧಾನ ನೀಡಿರುವುದು ಭಾರತೀಯ ಸಂವಿಧಾನದ ಘನತೆಯನ್ನು ನೂರುಪಟ್ಟು ಹೆಚ್ಚಿಸುವಂತಿದೆ.

 

 

ಪ್ರಜಾಪ್ರಭುತ್ವದಲ್ಲಿ ಪ್ರಜಾಪ್ರಭು ಮತ್ತು ಪ್ರಜಾಪ್ರತಿ ಇವರ ಜವಾಬ್ದಾರಿ ಏನೆಂದು ಭಾರತ ಸಂವಿಧಾನ ಹೇಳುತ್ತದೆ. ಅದಕ್ಕಿಂತ ಪರಿಣಾಮಕಾರಿಯಾಗಿ ವಚನ ಸಂವಿಧಾನ ಪ್ರತಿಪಾದಿಸುತ್ತದೆ. ‘ನಡೆ ನುಡಿ ಸಿದ್ಧಾಂತವಾದಲ್ಲಿ ಕುಲ ಹೊಲೆ ಸೂತಕವಿಲ್ಲ’ ಎನ್ನುವರು ಮಾದಾರ ಚನ್ನಯ್ಯನವರು. ಹಮ್ಮು, ಬಿಮ್ಮು ಬಿಟ್ಟು ಎಲ್ಲರೊಳಗೊಂದಾಗಿ ಬಾಳಬೇಕು ಎನ್ನುವರು.

ಈ ಸಂದರ್ಭದಲ್ಲಿ ಸಿದ್ದಗಂಗೆಯ ಶ್ರೀ ಸಿದ್ದಲಿಂಗ ಸ್ವಾಮಿಗಳು, ಬಾಲ್ಕಿಯ ಹಿರೇಮಠದ ಬಸವಲಿಂಗ ಪಟ್ಟದ್ದೇವರು, ಗದಗಿನ ತೋಂಟದ ಸಿದ್ದರಾಮ ಸ್ವಾಮಿಗಳು, ಬೇಲಿಮಠದ ಶಿವರುದ್ರ ಸ್ವಾಮಿಗಳು, ಇಳಕಲ್ ನ ಮಹಾಂತ ಸ್ವಾಮಿಗಳು, ಮೋಟಗಿ ಮಠದ ಚೆನ್ನಬಸವ ಸ್ವಾಮಿಗಳು ಹಾಗೂ ಕರ್ನಾಟಕದ ಬೇರೆ ಬೇರೆ ಭಾಗಗಳಿಂದ ಸು 170 ಜನ ಸ್ವಾಮೀಜಿಗಳು ಶಿಬಿರಾರ್ಥಿಗಳಾಗಿ ಭಾಗವಹಿಸಿದ್ದರು.

ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.

 

BC Suddi   About Us
BC Suddi Bcsuddi is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World. Read More
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon