ಮಂಗಳೂರು: ರಾಜ್ಯದಲ್ಲಿ ಕೆಲವೆಡೆ ವರುಣನ ಆರ್ಭಟ ಮುಂದುವರಿದಿದ್ದು, ಕರಾವಳಿ ಜಿಲ್ಲೆಯಲ್ಲಿ ನಿರಂತರವಾಗಿ ಭಾರೀ ಮಳೆಯಾಗುತ್ತಿದೆ. ಕಳೆದ ನಾಲ್ಕು ದಿನದಿಂದ ಮಳೆಯಾಗಿದ್ದು, ಜನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಇನ್ನು ಜಿಲ್ಲೆಗಳ ಬಹುತೇಕ ಎಲ್ಲಾ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ.
ಹೀಗಾಗಿ ಕಾಫಿನಾಡು ಚಿಕ್ಕಮಗಳೂರು ಹಾಗೂ ಕೊಡಗು ಸೇರಿದಂತೆ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ಶಾಲೆ-ಕಾಲೇಜುಗಳಿಗೆ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಡಳಿತ ರಜೆ ಘೋಷಣೆ ಮಾಡಿದೆ. ಮಳೆಯಿಂದ ಕಳೆದ ಮೂರು ದಿನಗಳಿಂದಲೂ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದ್ದು, ನಾಲ್ಕನೇ ದಿನವೂ ರಜೆ ಮುಂದುವರಿದಿದೆ.
ನಂದಿನಿ ಹಾಲಿನ ದರ 5 ರೂ. ಹೆಚ್ಚಳಕ್ಕೆ ಅನುಮತಿ ಕೋರಿ ಕೆಎಂಎಫ್ ನಿಯೋಗದಿಂದ ಸಿಎಂ ಭೇಟಿ
ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಧಾರಾಕಾರ ಮಳೆ ಹಿನ್ನೆಲೆಯಲ್ಲಿ ಮಲೆನಾಡು ಭಾಗದ ಕೊಪ್ಪ, ಶೃಂಗೇರಿ, ಕಳಸ ತಾಲೂಕಿನ ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ಇಂದು ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಆದೇಶಿಸಿದ್ದಾರೆ. ಚಿಕ್ಕಮಗಳೂರು ತಾಲೂಕಿನ ಜಾಗರ, ವಸ್ತಾರೆ, ಖಾಂಡ್ಯ, ಆಲ್ದೂರು, ಆವತಿ ಹೋಬಳಿ ವ್ಯಾಪ್ತಿಯ ಅಂಗನವಾಡಿ, ಶಾಲೆಗಳಿಗೆ ಇಂದು ರಜೆ ಘೋಷಣೆ ಮಾಡಲಾಗಿದೆ.
ಕೊಡಗು ಜಿಲ್ಲೆಯಾದ್ಯಂತ ಧಾರಾಕಾರ ಮಳೆ ಹಿನ್ನೆಲೆಯಲ್ಲಿ ಜಿಲ್ಲೆಯ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆಗಳಿಗೆ ಹಾಗೂ ಕಾಲೇಜುಗಳಿಗೆ ಇಂದು ರಜೆ ಘೋಷಣೆ ಮಾಡಿ ಕೊಡಗು ಜಿಲ್ಲಾಧಿಕಾರಿ ವೆಂಕಟ್ ರಾಜಾ ಆದೇಶ ಹೊರಡಿಸಿದ್ದಾರೆ. ಇನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಯ ಅಬ್ಬರ ಹೆಚ್ಚಾಗಿದೆ. ಮಳೆಯಿಂದಾಗಿ ಎಲ್ಲಾ ಜೀವ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ನದಿ ಸಮೀಪದ ಬಹುತೇಕ ದೇವಾಲಯಗಳು ಜಲಾವೃತಗೊಂಡಿದೆ. ಇಡೀ ಜಿಲ್ಲಾದ್ಯಂತ ಮಳೆಯ ಆರ್ಭಟಕ್ಕೆ ಜನ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಮಳೆ ಹೆಚ್ಚಾಗಿರುವ ಹಿನ್ನಲೆಯಲ್ಲಿ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಉಡುಪಿ ಜಿಲ್ಲೆಯಲ್ಲಿಯೂ ಭಾರೀ ಮಳೆಯಾಗುತ್ತಿದ್ದು, ಇಂದು ಕೂಡ ಮಳೆ ಮುಂದುವರಿಯುವ ಮುನ್ಸೂಚನೆ ನೀಡಲಾಗಿದೆ. ಹೀಗಾಗಿ ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ಅವರು, ಇಂದು ಉಡುಪಿ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿ ಆದೇಶ ಹೊರಡಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ಅಬ್ಬರದ ಮಳೆ ಮುಂದುವರಿದಿದ್ದು, ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ ತಾಲೂಕುಗಳ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.