‘ವೈದ್ಯಕೀಯ ಕ್ಷೇತ್ರದಲ್ಲಿ ಹಲವಾರು ಐತಿಹಾಸಿಕ ಬದಲಾವಣೆ-ಡಾ.ಸಿ.ಎನ್.ಮಂಜುನಾಥ್

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿ ಆಡಳಿತದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಹಲವಾರು ಐತಿಹಾಸಿಕ ಬದಲಾವಣೆಗಳು ಆಗಿವೆ ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಅಭ್ಯರ್ಥಿ ಡಾ. ಸಿ.ಎನ್. ಮಂಜುನಾಥ್ ಅವರು ತಿಳಿಸಿದರು.

ಬಿಜೆಪಿ ಚುನಾವಣಾ ಮಾಧ್ಯಮ ಕೇಂದ್ರದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಸ್ವಾತಂತ್ರ್ಯ ಬಂದಾಗ ಜೀವಿತಾವಧಿ (ಲೈಫ್ ಸ್ಪಾನ್) 37 ವರ್ಷ ಇದ್ದುದು ಈಗ ಸುಮಾರು 70 ವರ್ಷಕ್ಕೆ ಬಂದಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಹಲವಾರು ಸುಧಾರಣೆಗಳಾಗಿವೆ. ಚಿಕಿತ್ಸಾ ವ್ಯವಸ್ಥೆ ಕೂಡ ಚೆನ್ನಾಗಿ ಮುಂದುವರೆಯುತ್ತಿದೆ ಎಂದು ವಿಶ್ಲೇಷಿಸಿದರು.

ಮೋದಿಯವರು ಆಡಳಿತ ಆರಂಭಿಸುವ ಮೊದಲು ದೇಶದಲ್ಲಿ 5 ಏಮ್ಸ್ (ಅಖಿಲ ಭಾರತ ವೈದ್ಯ ವಿಜ್ಞಾನ ಸಂಸ್ಥೆ) ಇತ್ತು. ಇವತ್ತು 23 ಏಮ್ಸ್ ಇದೆ. ಭಾರತದಲ್ಲಿ ಹಾರ್ಟ್ ಅಟ್ಯಾಕ್, ಡಯಾಬಿಟಿಸ್, ಹೈ ಬ್ಲಡ್ ಪ್ರೆಶರ್, ಸ್ಟ್ರೋಕ್, ಕ್ಯಾನ್ಸರ್, ಸ್ಕ್ರೀನ್ ಅಡಿಕ್ಷನ್‍ನಂಥ ಲೈಫ್ ಸ್ಟೈಲ್ ಡಿಸೀಸ್ ಹೆಚ್ಚಾಗಿದೆ. 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರೂ ಈಗ ಹಾರ್ಟ್ ಅಟ್ಯಾಕ್‍ಗೆ ಸಿಲುಕುತ್ತಿದ್ದಾರೆ. ಹಾರ್ಟ್ ಅಟ್ಯಾಕ್ ತಡೆಯಲು ಆಂಜಿಯೋಪ್ಲಾಸ್ಟಿ ಅಥವಾ ಸ್ಟೆಂಟ್ ಬಳಸುತ್ತಾರೆ. ಮೋದಿಯವರು ಆಡಳಿತಕ್ಕೆ ಬರುವ ಮೊದಲು ಸ್ಟೆಂಟ್ ಬೆಲೆ 1 ಲಕ್ಷ, 70 ಸಾವಿರ ಇತ್ತು. ಅದನ್ನು 30 ಸಾವಿರಕ್ಕೆ ಇಳಿಸಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದರು.

Advertisement

ಭಾರತದಲ್ಲಿ ಪ್ರತಿ ವರ್ಷ 30 ಲಕ್ಷ ಜನರಿಗೆ ಹೃದಯಾಘಾತ ಆಗುತ್ತಿದೆ. ಹಾರ್ಟ್ ಅಟ್ಯಾಕ್ ಕೇವಲ ಶ್ರೀಮಂತರ ಕಾಯಿಲೆಯಲ್ಲ. ಅದು ಬಡವರ ಕಾಯಿಲೆಯೂ ಆಗಿದ್ದು, ಸ್ಟೆಂಟ್ ದರ ಇಳಿಸಿದ್ದರಿಂದ ಬಹಳಷ್ಟು ಜನರಿಗೆ ಪ್ರಯೋಜನ ಆಗಿದೆ. ನಮ್ಮ ದೇಶದಲ್ಲಿ 14 ಕೋಟಿ ಜನರು ಸಕ್ಕರೆ ಕಾಯಿಲೆಯಿಂದ (ಡಯಾಬಿಟಿಸ್) ಬಳಲುತ್ತಿದ್ದಾರೆ. ಇನ್ನೂ 14 ಕೋಟಿ ಜನರು ಡಯಾಬಿಟಿಸ್ (ಪ್ರಿ ಡಯಾಬಿಟಿಕ್) ಸನಿಹದಲ್ಲಿದ್ದಾರೆ ಎಂದು ವಿವರಿಸಿದರು.

ಹೈ ಬಿಪಿ, ಡಯಾಬಿಟಿಸ್, ಹಾರ್ಟ್ ಅಟ್ಯಾಕ್ ಉಳ್ಳವರು ಜೀವಿತಾವಧಿಯಿಡೀ ಔಷಧಿ ತೆಗೆದುಕೊಳ್ಳಬೇಕು. ಈ ಕಾಯಿಲೆಗಳು ಬಡವರಲ್ಲೂ ಇವೆ. ಕೈಗೆಟಕುವ ದರದಲ್ಲಿ ಔಷಧಿ ಸಿಗಬೇಕೆಂಬ ದೃಷ್ಟಿಯಿಂದ ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳನ್ನು ತೆರೆದಿದ್ದಾರೆ. ಕರ್ನಾಟಕದಲ್ಲಿ 1120 ಜನೌಷಧಿ ಕೇಂದ್ರಗಳಿವೆ. 1 ಸಾವಿರ ದರದ ಔಷಧಿ 100ರಿಂದ 150 ರೂಪಾಯಿಗೆ ಸಿಗುತ್ತಿದೆ ಎಂದು ತಿಳಿಸಿದರು.

ಕೋವಿಡ್ ಬಿಕ್ಕಟ್ಟನ್ನು ಮೋದಿಯವರು ನಿಭಾಯಿಸಿದ ರೀತಿಯನ್ನು ವಿಶ್ವ ಆರೋಗ್ಯ ಸಂಸ್ಥೆಯೂ ಶ್ಲಾಘಿಸಿದೆ. ಅಮೆರಿಕ, ಜಪಾನ್, ಚೀನಾ, ಯುರೋಪ್ ರಾಷ್ಟ್ರಗಳಿಗಿಂತ ಚೆನ್ನಾಗಿ ನಾವು ಕೋವಿಡ್ ನಿಭಾಯಿಸಿದ್ದೇವೆ. ರಾಷ್ಟ್ರೀಯ- ರಾಜ್ಯ ಟಾಸ್ಕ್ ಫೋರ್ಸ್ ತಂಡ ರಚಿಸಿ, ನಿರಂತರ ವರ್ಚುವಲ್ ಸಭೆಗಳನ್ನು ನಡೆಸಿ ಅವರು ಇದನ್ನು ನಿಭಾಯಿಸಿದರು ಎಂದು ವಿಶ್ಲೇಷಣೆ ಮಾಡಿದರು
. 270 ಕೋಟಿ ವ್ಯಾಕ್ಸಿನ್ ಡೋಸ್ ಕೊಡಲಾಯಿತು ಎಂದರು.
ಮೋದಿಯವರ ನೇತೃತ್ವದ ಕೇಂದ್ರ ಸರಕಾರದ ಕ್ರಮಗಳಿಂದ ವೆಂಟಿಲೇಟರ್ ಉತ್ಪಾದನೆ, ರೋಗಿಗಳ ಚಿಕಿತ್ಸೆಗೆ ಬೇಕಾದ ಆಮ್ಲಜನಕ ಉತ್ಪಾದನೆ ಸೇರಿ ಆರೋಗ್ಯ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ ಸಾಧ್ಯವಾಗಿದೆ. ಇವತ್ತು ನಮ್ಮ ದೇಶದಲ್ಲಿ 1 ಲಕ್ಷಕ್ಕೂ ಹೆಚ್ಚು ಐಸಿಯು ಬೆಡ್ ಲಭ್ಯವಿದೆ ಎಂದು ತಿಳಿಸಿದರು.

ಬಿಪಿಎಲ್ ರೋಗಿಗಳಿಗೆ ನೆರವಾಗುವ ಉಚಿತ ಚಿಕಿತ್ಸೆ ಕೊಡುವ ಆಯುಷ್ಮಾನ್ ಭಾರತ್ ಸ್ಕೀಮಿನಿಂದ ಕರ್ನಾಟಕ ರಾಜ್ಯದಲ್ಲಿ ಕಳೆದ ಆರೇಳು ವರ್ಷಗಳಲ್ಲಿ 1.32 ಕೋಟಿ ಜನರು ಚಿಕಿತ್ಸೆ ಪಡೆದಿದ್ದಾರೆ. ಇದೊಂದು ಉತ್ತಮ ಯೋಜನೆ ಎಂದು ತಿಳಿಸಿದರು.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement