‘ಶಾಸಕ ಸುನೀಲ್ ಕುಮಾರ್‌ ಹಿಂದೂಗಳ ಭಾವನೆಗೆ ಧಕ್ಕೆ ಉಂಟು ಮಾಡಿದ್ದಾರೆ’: ಹೆಬ್ಬಾಳಕರ್ ಕಿಡಿ

ಬೆಂಗಳೂರು:  ನಕಲಿ ಪರಶುರಾಮ ಮೂರ್ತಿ ಸ್ಥಾಪಿಸುವ ಮೂಲಕ ಕಾರ್ಕಳ ಕ್ಷೇತ್ರದ ಶಾಸಕ ಸುನೀಲ್ ಕುಮಾರ್‌ ಹಿಂದೂಗಳ ಭಾವನೆಗೆ ಧಕ್ಕೆ ಉಂಟು ಮಾಡಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಕಿಡಿ ಕಾಡಿದ್ದಾರೆ.

ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ನಕಲಿ ಪರಶುರಾಮ ಮೂರ್ತಿ ನಿರ್ಮಿಸಿರುವ ಮಾಜಿ ಸಚಿವ ಹಾಗೂ ಹಾಲಿ ಶಾಸಕ ವಿ.ಸುನೀಲ್ ಕುಮಾರ್ ವಿರುದ್ಧ ಕೆಪಿಸಿಸಿ ವತಿಯಿಂದ ಹಮ್ಮಿಕೊಂಡ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆಯಲ್ಲಿ ಮಾತನಾಡಿದ ಸಚಿವರು, ಬಿಜೆಪಿ ಶಾಸಕ ಸುನೀಲ್ ಕುಮಾರ್ ವಿರುದ್ಧ ಟೀಕಾ ಪ್ರಹಾರ ನಡೆಸಿದರು.

ಸುಳ್ಳನ್ನ ನೂರು ಬಾರಿ ಹೇಳಿ ನಿಜ ಮಾಡುವ ಕಲೆ ಸುನೀಲ್ ಕುಮಾರ್ ಅವರಿಗಿದೆ. ನಾನು ಬೆಳಗಾವಿಯಲ್ಲಿ ಶಿವಾಜಿ ಪ್ರತಿಮೆ ನಿರ್ಮಿಸಿರುವೆ, ನನಗೂ ಗೊತ್ತಿದೆ ಎಷ್ಟು ಸಮಯ ಬೇಕಾಗುತ್ತದೆ ಎಂದು. ಆದರೆ ಕೇವಲ 3 ತಿಂಗಳಲ್ಲಿ ಕಂಚಿನ ಪರಶುರಾಮ ಪ್ರತಿಮೆ ನಿರ್ಮಿಸಲಾಗಿದೆ. ಇಂಥ ಪ್ರತಿಮೆಗಳನ್ನು ನಿರ್ಮಿಸುವಾಗ ವರ್ಷಾನುಗಟ್ಟಲೆ ಸಮಯ ಹಿಡಿಯುತ್ತದೆ. ಚುನಾವಣೆಗಾಗಿ ಕೇವಲ ಮೂರು ತಿಂಗಳಲ್ಲಿ ಪ್ರತಿಮೆ ನಿರ್ಮಾಣ ಕಾರ್ಯ ಮುಗಿಸಿದ್ದು ಕೇಳಿ ಆಶ್ಚರ್ಯ ಉಂಟಾಯಿತು ಎಂದರು.

Advertisement

ಹಿಂದುತ್ವದ ಹೆಸರಿನಲ್ಲಿ ಜನರ ಭಾವನೆಗಳನ್ನು ಕೆರಳಿಸಿ ಮತ ಪಡೆಯುವ ಬಿಜೆಪಿಗರಿಗೆ ಕರಾವಳಿ ಜನತೆ ಮುಂದಿನ ದಿನಗಳಲ್ಲಿ ಪಾಠ ಕಲಿಸಬೇಕಿದೆ. ರಾಮಮಂದಿರ ನಿರ್ಮಾಣಗೊಂಡಿರುವ ಅಯೋಧ್ಯೆಯಲ್ಲಿಯೇ ಬಿಜೆಪಿ ಸೋತಿದ್ದು, ಕರಾವಳಿ ಜನರು ಕೂಡ ಬಿಜೆಪಿಗೆ ಪಾಠ ಕಲಿಸಬೇಕಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಅಧಿವೇಶನದಲ್ಲಿ ಸುನೀಲ್ ಕುಮಾರ್ ಮುಖ್ಯಮಂತ್ರಿಗಳ ವಿರುದ್ಧ ಟೀಕಾ ಪ್ರಹಾರ ಮಾಡುವುದನ್ನು ನೋಡಿದರೆ ನಾನೊಬ್ಬ ಸಂಭಾವಿತ ಎಂದು ತೋರಿಸಿಕೊಳ್ಳುತ್ತಾರೆ. ಪರಶುರಾಮನ ನಕಲಿ ಪ್ರತಿಮೆ ಸ್ಥಾಪಿಸಿ ಜನರ ದಿಕ್ಕನ್ನು ತಪ್ಪಿಸುತ್ತಿರುವ ಸುನೀಲ್ ಕುಮಾರ್ ಮಾಡಿದ ತಪ್ಪಿಗೆ ಶಿಕ್ಷೆಯಾಗಲೇಬೇಕು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅಭಿಪ್ರಾಯ ಪಟ್ಟರು.

ಎಸ್ ಐಟಿ ತನಿಖೆಗೆ ಆಗ್ರಹಿಸಿ ಮುಖ್ಯಮಂತ್ರಿಗೆ ಮನವಿ
ಪರಶುರಾಮ ಥೀಮ್ ನಿರ್ಮಾಣದಲ್ಲಿ ಆಗಿರುವ ಅವ್ಯವಹಾರ ಹಾಗೂ ನಕಲಿ ಪರಶುರಾಮ ಪ್ರತಿಮೆ ನಿರ್ಮಾಣದ ಪ್ರಕರಣವನ್ನು ವಿಶೇಷ ತನಿಖಾ ದಳ (ಎಸ್ ಐಟಿ)‌ ರಚಿಸಿ ತನಿಖೆ ನಡೆಸುವಲ್ಲಿ ಪ್ರಯತ್ನಿಸುವುದಾಗಿ ಹೇಳಿದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ವಿಧಾನ ಷರಿಷತ್ ಸದಸ್ಯರುಗಳಾದ ಮಂಜುನಾಥ್ ಭಂಡಾರಿ, ಐವನ್ ಡಿಸೋಜ, ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷಿ ಕೊಡಿಸುವ ಎಲ್ಲಾ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.

ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ, ಮಾಜಿ ಸಚಿವರಾದ ರಮಾನಾಥ್ ರೈ, ವಿನಯ್ ಕುಮಾರ್ ಸೊರಕೆ, ಮುಖಂಡರುಗಳಾದ ಮಿಥುನ್ ರೈ, ಸುಧೀರ್ ಕುಮಾರ್ ಮರೋಳಿ, ಅಶೋಕ್ ಕೊಡವೂರು ಮಾತನಾಡಿ ನಕಲಿ ಪ್ರತಿಮೆ ಅವ್ಯವಹಾರದ ಬಗ್ಗೆ ಶಾಸಕ ಸುನಿಲ್ ಕಾರ್ಯವೈಕರಿಯನ್ನು ಖಂಡಿಸಿದರು.ಕಾರ್ಯಕ್ರಮದ ಸಂಯೋಜಕರಾದ ಉದಯ್ ಶೆಟ್ಟಿ ಮುನಿಯಾಲ್ ಪ್ರಕರಣದ ಗಂಭೀರತೆಯ ಬಗ್ಗೆ ವಿವರಿಸಿದರು.ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ನೇತೃತ್ವದ ನಿಯೋಗದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಯಿತು.

 

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement