ಭುವನೇಶ್ವರ: ಮುಂದಿನ 10 ವರ್ಷಗಳ ಕಾಲ ಒಡಿಶಾದಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರುವುದಿಲ್ಲ. ಸತತ 6ನೇ ಬಾರಿಗೆ ಬಿಜೆಡಿ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ ಎಂದು ಒಡಿಶಾ ಸಿಎಂ ನವೀನ್ ಪಟ್ನಾಯಕ್ ತಿಳಿಸಿದ್ದಾರೆ.
ಜೂನ್ 10ರಂದು ಭುವನೇಶ್ವರದಲ್ಲಿ ಬಿಜೆಪಿ ಮುಖ್ಯಮಂತ್ರಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂಬ ಪ್ರಧಾನಿ ಮೋದಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಜೂನ್ 10ರಂದು ಏನೂ ಆಗುವುದಿಲ್ಲ. ಜೂನ್ 10 ಬಿಡಿ, ಮುಂದಿನ 10 ವರ್ಷಗಳಲ್ಲಿ ನಮ್ಮ ರಾಜ್ಯದ ಜನರ ಮನಸ್ಸನ್ನು ಗೆಲ್ಲಲು ಬಿಜೆಪಿಗೆ ಸಾಧ್ಯವಿಲ್ಲ. ಸತತ 6ನೇ ಬಾರಿಗೆ ಬಿಜೆಡಿ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದರು.
ಇನ್ನು ಬಿಜು ಪಟ್ನಾಯಕ್ ಅವರಿಗೆ ಭಾರತ ರತ್ನ ನೀಡದಿರುವ ಬಗ್ಗೆ ಪ್ರಧಾನಿ ಮೋದಿಯವರನ್ನು ಪ್ರಶ್ನಿಸಿದರು. ಒಡಿಶಾದಲ್ಲಿ ಹಲವಾರು ವೀರ ಪುತ್ರರಿದ್ದಾರೆ. ಆ ಪೈಕಿ ಕೆಲವರ ಬಗ್ಗೆ ನೀವು ಮಾತನಾಡಿದ್ದೀರಿ. ಬಿಜು ಪಟ್ನಾಯಕ್ ಸೇರಿ, ಅವರಲ್ಲಿ ಯಾರೂ ಭಾರತ ರತ್ನಕ್ಕೆ ಅರ್ಹರಿರಲಿಲ್ಲವೇ? ಎಂದು ಪ್ರಶ್ನೆ ಮಾಡಿದ್ದಾರೆ.
ಮೋದಿ ಅವರು 2014 ಹಾಗೂ 2019ರಲ್ಲಿ ನೀಡಿದ್ದ ಭರವಸೆಗಳು ಜನರಿಗೆ ತಿಳಿದಿದೆ. ಕಳೆದ 24 ವರ್ಷಗಳಿಂದ ಬಿಜೆಡಿ ಸರ್ಕಾರವನ್ನು ಜನ ನೋಡಿದ್ದಾರೆ. ಬೆಲೆ ಏರಿಕೆ ನಿಯಂತ್ರಣ, 2 ಕೋಟಿ ಉದ್ಯೋಗ ಸೃಷ್ಟಿ, ಎಲ್ಪಿಜಿ, ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ, ಕುಗ್ರಾಮಗಳಿಗೆ ಮೊಬೈಲ್ ಸಂಪರ್ಕ ಕಲ್ಪಿಸುವುದು ಮುಂತಾದ ಬಿಜೆಪಿಯ ಭರವಸೆಗಳು ಜನರಿಗೆ ನೆನಪಿದೆ. ಚುನಾವಣೆ ಬಂದಾಗ ಮಾತ್ರ ನಿಮಗೆ ಒಡಿಶಾದ ನೆನಪಾಗುತ್ತದೆ. ಅದರಿಂದ ಪ್ರಯೋಜವಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.