ಬೆಂಗಳೂರು: ಸನಾತನ ಧರ್ಮ ಡೆಂಗ್ಯೂ, ಮಲೇರಿಯಾ ಇದ್ದಂತೆ ಅಂತ ವಿವಾದಾತ್ಮಕ ಹೇಳಿಕೆ ನೀಡಿದ್ದ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಅವರಿಂದು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಮುಂದೆ ಹಾಜರಾಗುವ ಸಾಧ್ಯತೆ ಇದೆ .
ಸನಾತನ ಧರ್ಮದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಹಿನ್ನಲೆಯಲ್ಲಿ 5 ತಿಂಗಳ ಹಿಂದೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸಮನ್ಸ್ ನೀಡಿತ್ತು. ಖುದ್ದಾಗಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು. ಕಳೆದ ಮಾರ್ಚ್ 4 ರಂದು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿತ್ತು. ಆದ್ರೆ ಕಾರಣಾಂತರದಿಂದ ಗೈರಾಗಿದ್ದ ಉದಯನಿಧಿ ಸ್ಟಾಲಿನ್ ಅವರಿಂದು ಬೆಳಗ್ಗೆ 10:30ರ ವೇಳೆಗೆ ಬೆಂಗಳೂರಿನ 42ನೇ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಎದುರು ಹಾಜರಾಗಲಿದ್ದಾರೆ ಮೂಲಗಳಿಂದ ತಿಳಿದು ಬಂದಿದೆ.
ಬೆಂಗಳೂರಿನ ಪರಮೇಶ್ ಎಂಬುವವರು ಉದಯನಿಧಿ ಹೇಳಿಕೆ ವಿರುದ್ಧ ಖಾಸಗಿ ದೂರು ಸಲ್ಲಿಸಿದ್ದರು. ಈ ಸಂಬಂಧ ವಿಚಾರಣೆ ನಡೆಸಿದ್ದ 42ನೇ ಎಸಿಎಂಎಂ ಕೋರ್ಟ್ ನ್ಯಾಯಾಧೀಶರಾದ ಜೆ. ಪ್ರೀತ್ ಅವರಿದ್ದ ಪೀಠ 5 ತಿಂಗಳ ಹಿಂದೆ ಸಮನ್ಸ್ ಜಾರಿಗೊಳಿಸಿತ್ತು.
2023ರ ಸೆಪ್ಟೆಂಬರ್ 3 ರಂದು ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, ಸನಾತನನ ಧರ್ಮವು ಡೆಂಗ್ಯೂ, ಮಲೇರಿಯಾ ಇದ್ದಂತೆ. ಅದನ್ನು ನಿರ್ಮೂಲನೆ ಮಾಡಬೇಕೇ ಹೊರತು, ವಿರೋಧಿಸಬಾರದು ಎಂದು ಉದಯನಿಧಿ ಸ್ಟಾಲಿನ್ ವಿವಾದಾತ್ಮಕ ಹೇಳಿಕೆ ನೀಡಿದ್ದರು.