ಬೆಂಗಳೂರು: ಕಾಂಗ್ರೆಸ್ ಪಕ್ಷ ಮತ್ತು ಆ ಪಕ್ಷದ ಸರಕಾರದ ಕಳೆದ 6 ತಿಂಗಳ ಬೆಳವಣಿಗೆಗಳಿಂದ ಆ ಪಕ್ಷದ ಕಾರ್ಯಕರ್ತರಲ್ಲಿ ಹತಾಶ ಮನೋಭಾವನೆ ಸೃಷ್ಟಿಗೆ ಕಾರಣವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕರಾದ ಬಿ.ವೈ.ವಿಜಯೇಂದ್ರ ಅವರು ತಿಳಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ದಿನೇ ದಿನೇ ರಾಜ್ಯ ಸರಕಾರದ ವೈಫಲ್ಯಗಳು ಬೆಳಕಿಗೆ ಬರುತ್ತಿವೆ. ಬೆಳಗಾವಿಯಲ್ಲಿ ಪರಿಶಿಷ್ಟ ಮಹಿಳೆ ವಿವಸ್ತ್ರಗೊಳಿಸಿದ ಘಟನೆ, ಮಾಲೂರಿನ ಘಟನೆಗಳು ಕಪ್ಪು ಚುಕ್ಕಿಯಂತಿವೆ. ಜೊತೆಗೇ ನಮ್ಮ ಹಿರಿಯರು ಮತ್ತು ಮಾಜಿ ಡಿಸಿಎಂ ಗೋವಿಂದ ಕಾರಜೋಳ ಅವರ ಚಿತ್ರದುರ್ಗದ ಪತ್ರಿಕಾಗೋಷ್ಠಿ ಸಂದರ್ಭದಲ್ಲಿ ನುಗ್ಗಿ ಗಲಾಟೆ ಮಾಡಿದ್ದಾರೆ.ಇದು ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ತಾಳ್ಮೆ ಕಳಕೊಳ್ಳುವುದರ ನಿದರ್ಶನ ಎಂದು ವಿಶ್ಲೇಷಿಸಿದರು.
136 ಶಾಸಕರ ಸ್ಥಾನದೊಂದಿಗೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ. ಜನರ ವಿಶ್ವಾಸ ಕಳಕೊಳ್ಳುತ್ತಿರುವ ಅರಿವು ಇದೀಗ ಅವರಿಗೆ ಗೊತ್ತಾಗುತ್ತಿದೆ. ಹಾಗಾಗಿ ಈ ರೀತಿ ನಡೆದುಕೊಳ್ಳುತ್ತಿದ್ದಾರೆ ಎಂದು ವಿವರಿಸಿದರು.
ಮುಖ್ಯಮಂತ್ರಿಗಳು ಇವತ್ತು ಪ್ರಧಾನಮಂತ್ರಿಗಳನ್ನು ಭೇಟಿ ಮಾಡಿದ್ದಾರೆ. ಪಾಪ; ಪ್ರಧಾನಮಂತ್ರಿಗಳ ಅಪಾಯಿಂಟ್ಮೆಂಟ್ ಕೊಡಿಸ್ರಿ ಎಂದು ಮೊನ್ನೆ ಅಧಿವೇಶನದಲ್ಲಿ ಬೊಬ್ಬೆ ಹೊಡೆಯುತ್ತಿದ್ದರು. ರಾಜ್ಯದ ಪರವಾಗಿ ಸಿಎಂ ಮನವಿಯನ್ನೂ ಕೊಟ್ಟುಬಂದಿದ್ದಾರೆ. ಮತ್ತೊಂದೆಡೆ ಮುಖ್ಯಮಂತ್ರಿಗಳು ಮನವಿ ಕೊಟ್ಟು ಅರ್ಧ ಗಂಟೆ ಆಗುವುದಕ್ಕಿಂತ ಮೊದಲೇ ಕಾಂಗ್ರೆಸ್ ವಕ್ತಾರ ಉಗ್ರಪ್ಪನವರು ಕೇಂದ್ರ ಸರಕಾರವನ್ನು ಟೀಕೆ ಮಾಡುತ್ತಿದ್ದಾರೆ. ಅಂದರೆ ಕಾಂಗ್ರೆಸ್ ಸರಕಾರ, ಮುಖಂಡರ ಉದ್ದೇಶ ಕೇಂದ್ರದ ಪರಿಹಾರ ಪಡೆಯುವುದೇ ಅಥವಾ ರಾಜಕಾರಣ ಮಾಡುವುದೇ ಎಂಬುದನ್ನು ಅವರು ತೀರ್ಮಾನ ಮಾಡಬೇಕು ಎಂದು ಆಕ್ಷೇಪಿಸಿದರು.
ಪ್ರಧಾನಿ ನಡವಳಿಕೆ ಬಗ್ಗೆ ಉಗ್ರಪ್ಪ ಹೇಳಬೇಕಿಲ್ಲ.ನಮ್ಮ ದೇಶದ ಪ್ರಧಾನಮಂತ್ರಿಯವರ ನಡವಳಿಕೆಯನ್ನು ಉಗ್ರಪ್ಪನವರನ್ನು ಕೇಳಿ ತೀರ್ಮಾನ ಮಾಡಲಾಗದು ಎಂದು ಅವರು ಈ ಕುರಿತು ಪ್ರಶ್ನೆಗೆ ಉತ್ತರ ಕೊಟ್ಟರು. ಅವರು ನಮ್ಮ ಹೆಮ್ಮೆಯ ಪ್ರಧಾನಮಂತ್ರಿಗಳು. ಕೇವಲ ಬಿಜೆಪಿ ಮಾತ್ರವಲ್ಲ, ದೇಶದ ಪ್ರತಿಯೊಬ್ಬ ಪ್ರಜೆಯೂ ಅವರ ಬಗ್ಗೆ ಹೆಮ್ಮೆ ಪಡುತ್ತಿದ್ದಾರೆ. ಉಗ್ರಪ್ಪ, ರಾಮಪ್ಪ, ಸೋಮಪ್ಪನನ್ನು ಕೇಳಿ ತೀರ್ಮಾನ ಮಾಡುವುದಲ್ಲ ಎಂದು ಬಿ.ವೈ.ವಿಜಯೇಂದ್ರ ಅವರು ಸ್ಪಷ್ಟಪಡಿಸಿದರು.