ಚಿತ್ರದುರ್ಗ: ಸರ್ಕಾರಿ ಕೆಲಸದಲ್ಲಿ ಪ್ರಾಮಾಣಿಕತೆ, ದಕ್ಷತೆಯಿಂದ ಕಾರ್ಯನಿರ್ವಹಿಸಿದ ಅಧಿಕಾರಿ ಜನಮಾನಸದಲ್ಲಿ ಶಾಶ್ವತವಾಗಿ ಉಳಿಯುತ್ತಾನೆ. ಅದರಲ್ಲೂ ಶಿಕ್ಷಣದ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ವ್ಯಕ್ತಿ ಪ್ರತಿಯೊಬ್ಬ ವಿದ್ಯಾರ್ಥಿಯ ಜೀವನದಲ್ಲಿ ಅಚ್ಚಳಿಯದೇ ಇರುತ್ತಾರೆಂದು ಸರ್ಕಾರಿ ಕಲಾ ಪದವಿ(ಸ್ವಾಯತ್ತ) ಕಾಲೇಜು ಪ್ರಾಂಶುಪಾಲ ಬಿ.ಟಿ.ತಿಪ್ಪೇರುದ್ರಪ್ಪ ಹೇಳಿದರು.
ಅವರು, ನಗರದ ಕಾಲೇಜಿನ ಡಾ.ಬಿ.ಆರ್.ಅಂಬೇಡ್ಕರ್ ಸಭಾಂಗಣದಲ್ಲಿ ಸೋಮವಾರ ಸ್ನಾತಕೋತ್ತರ ಸಮಾಜಶಾಸ್ತ್ರ ವಿಭಾಗದ ಪ್ರಾಧ್ಯಾಪಾಕ ಡಾ.ಸಿ.ಸುರೇಶ್ ವಯೋನಿವೃತ್ತಿ ಪಡೆದ ಹಿನ್ನೆಲೆಯಲ್ಲಿ ಏರ್ಪಡಿಸಿದ್ದ ಬೀಳ್ಕೊಡಿಗೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಸರ್ಕಾರಿ ಉದ್ಯೋಗದಲ್ಲಿ ಪ್ರಾಮಾಣಿಕತೆ ಉಳಿಸಿಕೊಳ್ಳುವುದು ಕಷ್ಟ. ವಿಶೇಷವಾಗಿ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವ ಪ್ರತಿಯೊಬ್ಬರೂ ಪುಣ್ಯವಂತರು. ಇಂತಹ ಕೆಲಸವನ್ನು ಸುಮಾರು 25 ವರ್ಷಗಳ ಕಾಲ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ ಡಾ.ಸಿ.ಸುರೇಶ್ರವರ ಕಾರ್ಯ ಅನನ್ಯ. ಅವರು, ವಿದ್ಯಾರ್ಥಿಗಳ ಶಿಕ್ಷಣದ ಬೆಳವಣಿಗೆಗೆ ನಿಸ್ವಾಥ ಸೇವೆಸಲ್ಲಿಸಿದ್ಧಾರೆ. ಸರ್ಕಾರಿ ಕಾಲೇಜಿನಲ್ಲಿ ಕಾರ್ಯನಿರ್ವಹಿಸುತ್ತಿದ್ದರೂ ಸಮಯ ಪ್ರಜ್ಞೆ ಹೆಚ್ಚಿತ್ತು. ಇದು ಎಲ್ಲಾ ವಿದ್ಯಾರ್ಥಿಗಳಿಗೆ, ಪ್ರಾಧ್ಯಾಪಕರಿಗೆ ಮಾದರಿಯಾಗಿತ್ತು ಎಂದರು.
ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಪ್ರಾಧ್ಯಾಪಾಕ ಡಾ.ಸಿ.ಸುರೇಶ್, ಕಾಲೇಜು ಶಿಕ್ಷಣ ರಂಗದಲ್ಲಿ ಕಳೆದ 25 ವರ್ಷಗಳ ಸೇವೆ ನನಗೆ ತೃಪ್ತಿತಂದಿದೆ. ಚಳ್ಳಕೆರೆ, ಚಿತ್ರದುರ್ಗ, ತುರುವನೂರು ಕಾಲೇಜುಗಳಲ್ಲಿ ನಿರಂತರ ಸೇವೆ ಸಲ್ಲಿಸಿ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಸರ್ಕಾರಿ ಹುದ್ದೆಯಲ್ಲಿ ಸಮಯ ನಿಷ್ಟೆ, ದಕ್ಷತೆಯನ್ನು ಮೈಗೂಡಿಸಿಕೊಂಡಾಗ ಯಶಸ್ಸು ಕಾಣಲು ಸಾಧ್ಯ. ನನ್ನೊಟ್ಟಿಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು ಎಂದರು.
ಸರ್ಕಾರಿ ಕಲಾ ಕಾಲೇಜು ಪ್ರಾಧ್ಯಾಪಕರ ಸಂಘದ ಕಾರ್ಯದರ್ಶಿ ಡಾ.ಗಂಗಾಧರ, ಮಾಟ್ರಿನ್, ನಿವೃತ್ತ ಪ್ರಾಧ್ಯಾಪಕರಾದ ಸಿ.ನಾಗರಾಜು, ಸಿದ್ದಲಿಂಗಯ್ಯ, ಡಾ.ಬಸವರಾಜು, ಡಾ.ಲೇಪಾಕ್ಷಿ, ಡಾ.ಜೆ.ತಿಪ್ಫೇಸ್ವಾಮಿ, ಡಾ.ಕರಿಯಣ್ಣ, ಮೇಘನ, ಸೌಮ್ಯ, ಲಕ್ಷ್ಮಿದೇವಿ, ಶಿವಕುಮಾರ್, ಲೀಲಾವತಿ, ಹಳೇವಿದ್ಯಾರ್ಥಿಗಳಾದ ಸತೀಶ್ಕುಮಾರ್, ಎಚ್.ಮಹಲಿಂಗಪ್ಪ, ಬಿ.ರೂಪ, ಚಳ್ಳಕೆರೆವೀರೇಶ್, ಜೆ.ಸಿ.ಶಶಿಕುಮಾರ್, ಕ್ಯಾಸಯ್ಯ ಮುಂತಾದವರು ಉಪಸ್ಥಿತರಿದ್ದರು.