ಸೋನಿಪತ್ : ಹರಿಯಾಣ ವಿಧಾನಸಭಾ ಚುನಾವಣೆ ಪ್ರಚಾರದಲ್ಲಿ ಕರ್ನಾಟಕದ ಮುಡಾ ಪ್ರಕರಣದ ಪ್ರಸ್ತಾಪವಾಗಿದೆ. ಸೋನಿಪತ್‌ನಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಮುಡಾ ವಿಚಾರವನ್ನು ಪ್ರಸ್ತಾಪಿಸಿದ ಪ್ರಧಾನಿ ನರೇಂದ್ರ ಮೋದಿ, ಸಿಎಂ ಸಿದ್ದರಾಮಯ್ಯ ವಿರುದ್ಧ ಹೈಕೋರ್ಟ್ ತನಿಖೆಗೆ ಆದೇಶಿಸಿದೆ, ಅವರ ವಿರುದ್ಧ ತನಿಖೆಯಾಗಲೇಬೇಕು ಎಂದು ಆಗ್ರಹಿಸಿದ್ದಾರೆ.
ಸಾರ್ವಜನಿಕ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಹೈಕಮಾಂಡ್ ಭ್ರಷ್ಟವಾದಾಗ ಕೆಳಗೆ ಇರುವವರಿಗೆ ಲೂಟಿ ಹೊಡೆಯಲು ಪರವಾನಿಗೆ ನೀಡಿದಂತಾಗಲಿದೆ. ಕಾಂಗ್ರೆಸ್ ಆಡಳಿತ ಮಾಡಿದ ಯಾವ ರಾಜ್ಯವೂ ಅಭಿವೃದ್ಧಿಯಾಗಿಲ್ಲ ಎಂದು ಹೇಳಿದ್ದಾರೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 2 ವರ್ಷ ಆಗಿದೆ. ಅಲ್ಲಿ ಯಾವ ಪರಿಸ್ಥಿತಿ ನಿರ್ಮಾಣವಾಗಿದೆ ನೋಡಿ. ಖುದ್ದು ಅಲ್ಲಿಯ ಮುಖ್ಯಮಂತ್ರಿ ವಿರುದ್ಧ ಭೂ ಹಗರಣದ ಆರೋಪ ಕೇಳಿ ಬಂದಿದೆ, ಹೈಕೋರ್ಟ್ ಚಾಟೀ ಬೀಸಿ ತನಿಖೆಗೆ ಆದೇಶಿಸಿದೆ ಎಂದು ತಿರುಗೇಟು ನೀಡಿದ್ದಾರೆ.