ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮ ಹಣ ವರ್ಗಾವಣೆ ಪ್ರಕರಣ ಹಿನ್ನೆಲೆ ಸಿಎಂ ಸಿದ್ದರಾಮಯ್ಯ ಸರ್ಕಾರದ ಮೊದಲ ವಿಕೆಟ್ ಇಷ್ಟರಲ್ಲೇ ಪತನವಾಗುವ ಸಾಧ್ಯತೆ ಗೋಚರಿಸುತ್ತಿದೆ. 187 ಕೋಟಿ ರೂಪಾಯಿ ನಿಗಮದ ಹಣವನ್ನು ಬೇರೊಂದು ಖಾತೆ ವರ್ಗಾವಣೆಗೆ ಮೌಖಿಕ ಆದೇಶ ನೀಡುವ ಮೂಲಕ 80-85 ಕೋಟಿ ಹಣ ಲಪಟಾಯಿಸಲು ಮುಂದಾಗಿದ್ದರೆಂಬ ಆರೋಪಕ್ಕೊಳಗಾದ ಸಮಾಜ ಕಲ್ಯಾಣ ಮತ್ತು ಕ್ರೀಡಾ ಖಾತೆಯ ಸಚಿವ ಬಿ.ನಾಗೇಂದ್ರ ಅವರಿಗೆ ಸ್ವತಃ ಸಿಎಂ ಅವರೇ ರಾಜೀನಾಮೆ ನೀಡಬೇಕೆಂಬ ಸೂಚನೆ ನೀಡಿದ್ದಾರೆಂದು ಸಿಎಂ ಆಪ್ತ ಮೂಲಗಳು ಖಚಿತ ಪಡಿಸಿವೆ. ಈ ಹಿನ್ನೆಲೆಯಲ್ಲಿ ಸಚಿವ ಬಿ.ನಾಗೇಂದ್ರ ಅವರಿಗೆ ಸಂಕಷ್ಟ ಎದುರಾಗಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಕೋಟ್ಯಂತರ ಅವ್ಯವಹಾರದ ಹಿಂದೆ ಸಚಿವ ಬಿ.ನಾಗೇಂದ್ರ ಅವರ ಪಾತ್ರವಿದೆ. ಅಧೀಕ್ಷಕ ರಾಮಚಂದ್ರನ್ ಅವರು ಡೆತ್ ನೋಟ್ ವೊಂದನ್ನು ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದರು. ಇದರ ಬೆನ್ನಲ್ಲೇ ಸರ್ಕಾರದ ವಿರುದ್ಧ ಪ್ರತಿಭಟನೆಗೆ ಮುಂದಾದ ಬಿಜೆಪಿಗೆ ವಾಲ್ಮೀಕಿ ನಿಗಮದ ಅವ್ಯವಹಾರ ಪ್ರಕರಣ ಒಂದು ಅಸ್ತ್ರವಾಗಿತ್ತು. ಇದೀಗ ಇದನ್ನೇ ಮುಂದಿಟ್ಟುಕೊಂಡು ಸಚಿವ ಬಿ.ನಾಗೇಂದ್ರ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಜೂನ್ 2ರಂದು ಬಿಜೆಪಿ ರಾಜ್ಯದ್ಯಂತ ಪ್ರತಿಭಟನೆ ಹಮ್ಮಿಕೊಂಡಿತ್ತು. ಇದೆಲ್ಲವನ್ನು ಸೂಕ್ಷ್ಮವಾಗಿ ತಮನಿಸಿದ ಸಿಎಂ ಸಿದ್ದರಾಮಯ್ಯ ಅವರು, ಸಚಿವ ನಾಗೇಂದ್ರಗೆ ರಾಜೀನಾಮೆ ನೀಡಲು ಸೂಚಿಸಿದ್ದಾರೆ ಎಂದು ಹೇಳಲಾಗುತ್ತಿದೆ.