ಬೆಂಗಳೂರು:ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಡೆಪ್ಯೂಟಿ ಡೈರೆಕ್ಟರ್ ಪ್ರತಿಮಾ ಕೊಲೆ ಪ್ರಕರಣ ಸಂಬಂಧಿಸಿದಂತೆ ಪ್ರತಿಮಾ ಕೊಲೆಯು ಸಿನೆಮಾ ರೀತಿಯಲ್ಲಿ ನಡೆಸಲಾಗಿದೆ ಎಂಬ ಮಾಹಿತಿಯೊಂದು ಬೆಳಕಿಗೆ ಬಂದಿದೆ.
ನವೆಂಬರ್ 4 ರಂದು ಸಂಜೆಯ ಹೊತ್ತಿಗೆ ಪ್ರತಿಮಾರ ಕಾರು ಚಾಲಕ ಅವರನ್ನು ಮನೆಯ ಬಳಿ ಬಿಟ್ಟಿದ್ದಾರೆ. ಮನೆಯ ಒಳಗೆ ಹೋಗುವ ಮುನ್ನ ಹಿಂದಿನಿಂದ ಬಂದ ಹಂತಕರು ಈ ಕೃತ್ಯವನ್ನು ಎಸಗಿದ್ದಾರೆ. ಕುತ್ತಿಗೆಗೆ ಹಗ್ಗದಿಂದ ಬಿಗಿದು ಉಸಿರುಗಟ್ಟಿಸಿ ಬಳಿಕ ಚಾಕುವಿನಿಂದ ಕುತ್ತಿಗೆ ಸೀಳಿ ಭೀಕರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ ಎನ್ನುವ ಸ್ಪೋಟಕ ಅಂಶ ಬೆಳಕಿಗೆ ಬಂದಿದೆ.ಮರಣೋತ್ತರ ಪರೀಕ್ಷೆ ವೇಳೆ ಪ್ರತಿಮಾ ಕುತ್ತಿಗೆಯಲ್ಲಿ ಹಗ್ಗ ಬಿಗಿದಿರುವ ಗುರುತು ಪತ್ತೆಯಾಗಿದೆ.
ಹಂತಕರು ಸಿನಿಮಾ ಮಾದರಿಯಲ್ಲಿ ಪ್ರತಿಮಾರನ್ನು ಮನೆಯೊಳಗೆ ಎಳೆದೊಯ್ದು ಹಗ್ಗದಿಂದ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ.ಕುತ್ತಿಗೆಯನ್ನು ಚಾಕುವಿನಿಂದ ಸೀಳಿದ್ದಾರೆ. ಪ್ರತಿಮಾ ಅವರು ಕಚೇರಿಗೆ ತೆಗೆದುಕೊಂಡು ಹೋಗಿ ವಾಪಸ್ ಬಂದಿದ್ದ ಊಟದ ಬ್ಯಾಗ್ ಹಾಗೂ ಕನ್ನಡಕ ಕೂಡ ಬಾಗಿಲ ಬಳಿಯೇ ಬಿದ್ದಿತ್ತು ಎನ್ನುವುದು ತಿಳಿದು ಬಂದಿದೆ.
ಸುಬ್ರಹ್ಮಣ್ಯಪುರ ಠಾಣೆ ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.