ಬೆಂಗಳೂರು: ಮೂರು ಕೋಟಿ ರೂಪಾಯಿ ಮೊತ್ತಕ್ಕಿಂತ ಹಚ್ಚಿನ ಹಗರಣ ಆಗಿದ್ದರೆ ಸ್ವಯಂಪ್ರೇರಿತ ಕೇಸ್ ದಾಖಲಿಸಬಹುದೆಂಬ ಕಾನೂನಿದೆ. ಅದರಂತೆ ಸಿಬಿಐ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಕೋಟ್ಯಂತರ ರೂಪಾಯಿ ಹಗರಣ ಪ್ರಕರಣ ತೆಗೆದುಕೊಂಡಿದೆ. ರಾಜ್ಯ ಸರ್ಕಾರ ಸಿಬಿಐಗೆ ಎಲ್ಲಾ ರೀತಿಯ ಸಹಕಾರ ನೀಡಲಿದೆ ಗೃಹ ಸಚಿವ ಜಿ. ಪರಮೇಶ್ವರ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ಇಲಾಖೆಗಳ ತನಿಖೆ ಮಾಡುವ ಬಗ್ಗೆ ನಿರ್ಧಾರ ಕೈಗೊಂಡಿಲ್ಲ. ಸಿಬಿಐ ಪತ್ರ ಬರೆದ ಮೇಲೆ ತೀರ್ಮಾನಿಸಬೇಕು. ಅಗತ್ಯ ಬಂದರೆ ಪ್ರಕರಣವನ್ನು ಸಿಬಿಐಗೆ ನಾವೇ ಕೋಡುತ್ತೇವೆ. ಮೊದಲು ಅವರು ಪತ್ರ ಬರೆಯಲಿ. ನಾವು ಕ್ಯಾಬಿನೆಟ್‌ನಲ್ಲಿ ನಿರ್ಧಾರ ಮಾಡುತ್ತೇವೆ ಎಂದು ತಿಳಿಸಿದರು.
ಇನ್ನು ರಾಜ್ಯದಲ್ಲಿ ಲೋಕಸಭಾ ಚುನಾವಣೆ ಫಲಿತಾಂಶದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಬೇರೆ ಬೇರೆ ರೀತಿಯಲ್ಲಿ ಅಂದಾಜು ಮಾಡಿದ್ದೆವು. ಅದು ಏರುಪೇರಾಗಿದೆ. 50 ಸಾವಿರದ ಅಂತರದಲ್ಲಿ ಯಾರೆಲ್ಲ ಸೋತಿದ್ದಾರೆಯೋ ಆ ಕ್ಷೇತ್ರಗಳಲ್ಲಿ ಇನ್ನಷ್ಟು ಪ್ರಯತ್ನಿಸಬೇಕಿತ್ತು. ನಾವು ತುಮಕೂರನಲ್ಲಿ ಗೆಲ್ಲುವ ನಿರೀಕ್ಷೆ ಇತ್ತು. ಆದರೆ ಫಲಿತಾಂಶ ಏರುಪೇರಾಗಿದೆ ಎಂದರು.