ಬೆಂಗಳೂರು : ತೆರವಾಗಿರುವ ಮೂರು ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾಗಿದ್ದು ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಯಾಗಿದ್ದು ಈಗಾಗಲೇ ಸಂಡೂರು ಹಾಗೂ ಶಿಗ್ಗಾವಿ ಕ್ಷೇತ್ರಗಳಿಗೆ ಬಿಜೆಪಿ ಟಿಕೆಟ್ ಘೋಷಿಸಿದೆ. ಆದ್ರೆ ಚನ್ನಪಟ್ಟಣ ಕ್ಷೇತ್ರದ ಟಿಕೆಟ್‌ಗೆ ಮೈತ್ರಿ ನಾಯಕರ ನಡುವೆ ಈಗಾಗಲೇ ಜಟಾಪಟಿ ಆರಂಭವಾಗಿದೆ. ಈ ನಡುವೆ ಚನ್ನಪಟ್ಟಣ ಟಿಕೆಟ್ ಗೆ ಸಂಬಂಧಿಸಿದಂತೆ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಚನ್ನಪಟ್ಟಣ ಜೆಡಿಎಸ್ ಗೆದ್ದಿರುವ ಕ್ಷೇತ್ರ, ಈಗಾಗಲೇ ಹೈಕಮಾಂಡ್ ತಿಳಿಸಿದೆ ನಿಮ್ಮದೇ ಅಂತಿಮ ನಿರ್ಣಯ ಎಂದು ಕಾರ್ಯಕರ್ತರ ಜೊತೆಗೆ ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದರು. ಇದೇ ವೇಳೆ ಯೋಗೇಶ್ವರ್‌ಗೆ ಜೆಡಿಎಸ್ ಚಿಹ್ನೆ ಅಡಿಯಲ್ಲಿ ಸ್ಪರ್ಧೆಗೆ ಅವಕಾಶ ಕೊಡ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅವರು ಮೇಲಿದ್ದಾರೆ, ದೊಡ್ಡವರು ಅವರ ಬಗ್ಗೆ ನಾನೇನು ಚರ್ಚೆ ಮಾಡ್ಲಿ. ನನಗೆ ಗೊತ್ತಿಲ್ಲ ಅವ್ರು ಏನ್ ಮಾಡ್ತಾರೆ ಅಂತ. ಮಾಧ್ಯಮದಲ್ಲಿ ಗಮನಿಸಿದ್ದೇನೆ ಕಾಂಗ್ರೆಸ್ ಲೀಡರ್ಸ್ ಜೊತೆಗೆ ಯೋಗೇಶ್ವರ್ ಸಂಪರ್ಕದಲ್ಲಿ ಇದಾರೆ ಅಂತಾ ಬರ್ತಿದೆ. ಹೊರಗಡೆಯೂ ಚರ್ಚೆ ನಡಿತಿದೆ. ಎಲ್ಲರ ಜೊತೆಗೆ ಓಪನ್ ಆಗಿದ್ದಾರೆ. ಅವರು ಏನ್ ತೀರ್ಮಾನ ಮಾಡ್ತಾರೆ ಎಂದು ನನ್ನ ಜೊತೆಗೆ ಚರ್ಚೆ ಮಾಡಿಲ್ಲ ಎಂದರು. ಸಿಪಿ ಯೋಗೇಶ್ವರ್ ಕಾಂಗ್ರೆಸ್ ನಾಯಕರ ಸಂಪರ್ಕದಲ್ಲಿದ್ದಾರೆ, ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿದ್ದಾರೆ, ಜೆಡಿಎಸ್ ಬಿಜೆಪಿ ಮೈತ್ರಿಗೆ ಹುಳಿ ಹಿಂಡಲು ಕೆಲ ಬಿಜೆಪಿಗರು ಕಾಂಗ್ರೆಸ್ ಜತೆ ಶಾಮೀಲಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ವರ್ಚಸ್ಸು ಹಾಳು ಮಾಡುವ ಹುನ್ನಾರ ನಡೆದಿದೆ ಎಂದು ಬಿಜೆಪಿ ನಾಯಕರ ಮೇಲೆ ಕೇಂದ್ರ ಸಚಿವ ಕುಮಾರಸ್ವಾಮಿ ಗರಂ ಆಗಿದ್ದಾರೆ.