ಮಳೆಗಾಲದಲ್ಲಿ ಸಾಮಾನ್ಯವಾಗಿ ಸೊಳ್ಳೆಗಳ ಕಾಟ ಹೆಚ್ಚಾಗಿರುತ್ತದೆ. ಆದರೆ ಬೇಸಿಗೆಯ ದಿನಗಳಲ್ಲಿಯೂ ಬೆಳಿಗ್ಗೆ ಮತ್ತು ಸಂಜೆ ಸೊಳ್ಳೆಗಳು ಹೆಚ್ಚಾಗಿರುತ್ತವೆ. ಸೊಳ್ಳೆ ಕಚ್ಚಿದರೆ ಡೆಂಗ್ಯೂ , ಮಲೇರಿಯಾ, ಚಿಕುನ್ ಗುನ್ಯಾದಂಥಹ ಕಾಯಿಲೆಗಳು ಬರುತ್ತವೆ.
ಆದ್ದರಿಂದ, ನಮ್ಮನ್ನು ನಾವು ಸೊಳ್ಳೆಗಳಿಂದ ರಕ್ಷಿಸುವುದು ಬಹಳ ಮುಖ್ಯ. ಸೊಳ್ಳೆಗಳ ಕಾಟ ತಪ್ಪಿಸಲು ಲೋಷನ್ ಗಳು , ಕ್ರೀಮ್ ಗಳು, ಮಾರುಕಟ್ಟೆಯಲ್ಲಿ ಸಿಗುತ್ತವೆ. ಆದರೆ ಇವೆಲ್ಲವೂ ಚರ್ಮದ ಮೇಲೆ ಅಡ್ಡಪರಿಣಾಮಗಳನ್ನು ಉಂಟುಮಾಡುತ್ತದೆ. ಹಾಗಾಗಿ ಸೊಳ್ಳೆಗಳ ಕಾಟವನ್ನು ತಪ್ಪಿಸುವ ಸಲುವಾಗಿ ನೈಸರ್ಗಿಕ ವಿಧಾನವನ್ನು ಅಳವಡಿಸಿಕೊಳ್ಳುವುದು ಉತ್ತಮ. ಅಂತಹ ಒಂದು ವಿಧಾನವೆಂದರೆ ಸಸ್ಯಗಳು.
ಸೊಳ್ಳೆಗಳನ್ನು ಮನೆಯಿಂದ ದೂರವಿರಿಸಲು ತುಳಸಿ ಮತ್ತು ಪುದೀನ ಸಸಿ ಕೂಡಾ ಸಹಾಯ ಮಾಡುತ್ತದೆ. ತುಳಸಿ ಎಲೆಗಳ ತೀವ್ರವಾದ ಪರಿಮಳವು ಸೊಳ್ಳೆಗಳು ಮತ್ತು ಕೀಟಗಳನ್ನು ದೂರವಿಡಲು ಸಹಾಯ ಮಾಡುತ್ತದೆ. ಇದಲ್ಲದೆ, ಪುದೀನ ಸಸ್ಯವು ಸೊಳ್ಳೆಗಳು, ನೊಣಗಳು ಮತ್ತು ಇರುವೆಗಳನ್ನು ಸಹಾ ಮನೆಯಿಂದ ದೂರವಿರಿಸುತ್ತದೆ. ಚೆಂಡು ಹೂವು ಎಲ್ಲಾ ಕಾಲದಲ್ಲೂ ಅರಳುತ್ತದೆ.
ಈ ಹೂವಿನ ಸುವಾಸನೆಯು ಸೊಳ್ಳೆಗಳಿಗೆ ತೊಂದರೆ ಉಂಟುಮಾಡುತ್ತದೆ. ಈ ಕಾರಣದಿಂದ ಸೊಳ್ಳೆಗಳು ಈ ಸಸ್ಯದಿಂದ ದೂರವಿರುತ್ತದೆ. ಈ ಸಸಿಯನ್ನು ನೆಟ್ಟರೆ ಹೂ ಅರಳಿ ನಿಂತಾಗ ಮನೆಯ ಸೌಂದರ್ಯವು ಹೆಚ್ಚುತ್ತದೆ. ಸೊಳ್ಳೆ ಕಾಟದಿಂದ ಮುಕ್ತಿ ಕೂಡಾ ಸಿಗುತ್ತದೆ. ಇನ್ನು ಬೇಕಾದರೆ ಈ ಸಸ್ಯದ ಕುಂಡವನ್ನು ಮನೆಯ ಹೊಸ್ತಿಲಲ್ಲಿಟ್ಟರೆ ಸೊಳ್ಳೆ ಮನೆ ಒಳಗೆ ಬರುವುದನ್ನು ತಪ್ಪಿಸಬಹುದು. ಲ್ಯಾವೆಂಡರ್ ಸಸ್ಯದ ಎಲೆಗಳಲ್ಲಿ ಕಂಡುಬರುವ ಎಸೆನ್ಶಿಯಲ್ ಆಯಿಲ್ ಕಾರಣದಿಂದ ಈ ಸಸ್ಯದಿಂದ ಸುಗಂಧ ಹೊರ ಹೊಮ್ಮುತ್ತದೆ.
ಈ ಸುಗಂಧದ ಕಾರಣದಿಂದ ಸೊಳ್ಳೆಗಳು ಈ ಸಸಿ ಸುತ್ತ ಬರುವುದಿಲ್ಲ. ಈ ಸಸ್ಯಕ್ಕೆ ಹೆಚ್ಚಿನ ನೀರು ಕೂಡ ಅಗತ್ಯವಿಲ್ಲ ಮತ್ತು ಅದು ಹೆಚ್ಚು ಕಾಲ ಹಾಳಾಗುವುದಿಲ್ಲ. ರೋಸ್ಮರಿ ಇದನ್ನು ಗುಲ್ ಮೆಹೆಂದಿ ಅಂತಲೂ ಕರೆಯುತ್ತಾರೆ. ಈ ಸಸ್ಯದಿಂದ ಕೂಡಾ ಹೊರ ಬರುವ ವಿಶೇಷ ಪರಿಮಳದ ಕಾರಣದಿಂದ ಸೊಳ್ಳೆಗಳು, ನೊಣ ಮತ್ತು ಇತರ ಅನೇಕ ಕೀಟಗಳಿಂದ ದೂರ ಓಡುತ್ತವೆ.