ಬೆಂಗಳೂರು: ಸಾಲ ತೀರಿಸಲು ಮನೆ ಮಾಲಕಿಯನ್ನೇ ಹತ್ಯೆ ಮಾಡಿದ್ದ ಯುವತಿಯನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ.
ಮೋನಿಕಾ (24) ಬಂಧಿತ ಆರೋಪಿ. ಮೇ 10 ರಂದು ಕೆಂಗೇರಿ ಠಾಣಾ ವ್ಯಾಪ್ತಿಯ ಕೋನಸಂದ್ರದಲ್ಲಿ ಒಂಟಿ ಮಹಿಳೆಯ ಕೊಲೆ ನಡೆದಿತ್ತು. ಈಕೆ ತನ್ನ ಗೆಳೆಯನಿಗೆ ಆರ್ಥಿಕ ಸಹಾಯ ಮಾಡುವ ಉದ್ದೇಶದಿಂದ ಮೇ 10 ರಂದು ತನ್ನ ಮನೆ ಮಾಲಕಿ ದಿವ್ಯಾಳನ್ನು ಕೊಲೆ ಮಾಡಿದ್ದಾಳೆ ಎಂದು ತಿಳಿದುಬಂದಿದೆ. ಕೋಲಾರ ಮೂಲದ ಮೋನಿಕಾ ಕೋನಸಂದ್ರದಲ್ಲಿರುವ ದಿವ್ಯಾ ಅವರ ಮನೆಯ ಒಂದು ಭಾಗವನ್ನು ಬಾಡಿಗೆಗೆ ಪಡೆದಿದ್ದರು. ದಿವ್ಯಾಳನ್ನು ಹತ್ಯೆ ಮಾಡಿ ಆಕೆಯ ಬಳಿಯಿದ್ದ ಚಿನ್ನದ ಸರವನ್ನು ಕದ್ದು ಬಾಯ್ ಪ್ರೆಂಡ್ ಗೆ ನೀಡಲು ನಿರ್ಧರಿಸಿದ್ದಳು.
ಮೃತ ದಿವ್ಯಾ ಪತಿ ಗುರುಮೂರ್ತಿ ಕೆಂಗೇರಿಯ ಶಿವನಪಾಳ್ಯದಲ್ಲಿ ಸಲೂನ್ ನಡೆಸುತ್ತಿದ್ದರು. ಕೊಲೆ ನಡೆದಾಗ ದಿವ್ಯಾ ಅತ್ತೆ ಬೆಳಗ್ಗೆ ಕೆಲಸಕ್ಕೆಂದು ಮನೆಯಿಂದ ಹೊರಟಿದ್ದರು. ದಿವ್ಯಾ ತನ್ನ ಎರಡು ವರ್ಷದ ಮಗುವಿನೊಂದಿಗೆ ಮನೆಯಲ್ಲಿದ್ದ ಸಂದರ್ಭದಲ್ಲಿ ಮೋನಿಕಾ ಮನೆಯೊಳಗೆ ಪ್ರವೇಶಿಸಿ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿ 30 ಗ್ರಾಂ ತೂಕದ ಚಿನ್ನದ ಸರದೊಂದಿಗೆ ಪರಾರಿಯಾಗಿದ್ದಳು. ಬಳಿಕ ಸ್ಥಳೀಯ ಗಿರವಿದಾರರ ಬಳಿ ಚಿನ್ನದ ಸರವನ್ನು ಗಿರವಿ ಇಟ್ಟಿದ್ದಳು.
ಗುರುಮೂರ್ತಿ ಪತ್ನಿಗೆ ಕರೆ ಮಾಡಿದಾಗ ಸ್ಪಂದಿಸದಿದ್ದಾಗ ಕೊಲೆ ನಡೆದಿರುವುದು ಬೆಳಕಿಗೆ ಬಂದಿದೆ. ಗುರುಮೂರ್ತಿ ಕೂಡ ಮೋನಿಕಾಗೆ ಕರೆ ಮಾಡಿ ದಿವ್ಯಾ ಮನೆಯಲ್ಲಿದ್ದಾಳಾ ಎಂದು ತಿಳಿದುಕೊಂಡಿದ್ದರು. ಆದರೆ ಮೋನಿಕಾ ತಾನು ಮನೆಯಲ್ಲಿಲ್ಲ ಎಂದು ತಿಳಿಸಿದ್ದಾಳೆ.
ಕೆಲವು ಗಂಟೆಗಳ ನಂತರ ಗುರುಮೂರ್ತಿ ಮನೆಗೆ ಹೋದಾಗ, ಕೋಣೆಯೊಳಗೆ ಪತ್ನಿ ಶವವಾಗಿ ಬಿದ್ದಿರುವುದನ್ನು ಕಂಡು ಆತಂಕಗೊಂಡಿದ್ದಾರೆ. ಮನೆಯೊಳಗೆ ಕೊಲೆಗಾರ ಅಕ್ರಮವಾಗಿ ಪ್ರವೇಶಿಸಿದ ಕುರುಹುಗಳಿರಲಿಲ್ಲ . ಹೀಗಾಗಿ ಅನುಮಾನಗೊಂಡ ಪೊಲೀಸರು ಮೋನಿಕಾಳನ್ನು ವಿಚಾರಿಸಿದಾಗ ಸತ್ಯ ಬಹಿರಂಗವಾಗಿದೆ.