ಹಂಪಿ: ಕಳೆದ ವಾರ ಸುರಿದ ಮಳೆಯಿಂದ ವಿಜಯನಗರ ಜಿಲ್ಲೆಯ ವಿಶ್ವ ಪಾರಂಪರಿಕ ತಾಣವಾದ ಹಂಪಿಯಲ್ಲಿ ಶ್ರೀ ವಿರೂಪಾಕ್ಷೇಶ್ವರ ದೇವಸ್ಥಾನದ ರಥ ಬೀದಿಯಲ್ಲಿನ ಕೆಲವು ಸಾಲುಮಂಟಪಗಳು ಕುಸಿದಿದ್ದವು. ಅವುಗಳ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದ್ದು, ಎಂಟು ಪುರಾತನ ಬಾವಿಗಳು ಕಂಡು ಬಂದಿವೆ.
ಅವುಗಳಲ್ಲಿ ಒಂದು ಬಾವಿಯ ಮಣ್ಣನ್ನು ತೆರವುಗೊಳಿಸಿದಾಗ ಕೆಳಗಡೆ ಬಂಡೆ ಜೊತೆಗೆ ನೀರು ಕಾಣಿಸಿಕೊಂಡಿದೆ. ಉಳಿದ ಬಾವಿಗಳ ಮಣ್ಣು ತೆರವು ಕಾರ್ಯ ನಡೆದಿದೆ ಎಂದು ಕೇಂದ್ರ ಪುರಾತತ್ವ ಇಲಾಖೆಯ ಸಹಾಯಕ ಸಂರಕ್ಷಣಾಧಿಕಾರಿ ಎಚ್. ರವೀಂದ್ರ ತಿಳಿಸಿದ್ದಾರೆ.
ಪುರಾತತ್ವ ಇಲಾಖೆಯು ಕಳೆದ ೧೫ ದಿನಗಳಿಂದ ನಡೆಸುತ್ತಿರುವ ಈ ಕಾರ್ಯದಲ್ಲಿ ಒಟ್ಟು ಎಂಟು ಬಾವಿಗಳು ಇವೆ ಎಂದು ಇತಿಹಾಸ ತಜ್ಞರು ಉಲ್ಲೇಖಿಸಿದ್ದಾರೆ. ಈಗ ಅವುಗಳನ್ನು ಪತ್ತೆ ಮಾಡಲಾಗುತ್ತಿದ್ದು, ಬಾವಿಗಳ ಕುರಿತು ಸಮಗ್ರ ಅಧ್ಯಯನ ನಡೆಯಬೇಕಿದೆ ಎಂದು ಪುರಾತತ್ವ ಇಲಾಖೆಯ ಎ ಎಸ್ ಐ ಡಾ. ನಿಹಿಲ್ ದಾಸ್ ಮಾಹಿತಿ ನೀಡಿದ್ದಾರೆ