ಲಕ್ನೋ: ಹರ್ ಹರ್ ಶಂಭು ಭಕ್ತಿಗೀತೆಯನ್ನು ಹಾಡಿ ಸಾಮಾಜಿಕ ಜಾಲತಾಣದಲ್ಲಿ ಎಲ್ಲರ ಗಮನ ಸೆಳೆದಿರುವ ಉತ್ತರ ಪ್ರದೇಶದ ಖ್ಯಾತ ಯೂಟ್ಯೂಬ್ ಗಾಯಕಿ ಫರ್ಮಾನಿ ನಾಜ್ ಅವರ ಕಿರಿಯ ಸಹೋದರನನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಮುಜಾಫರ್ನಗರದ ಮೊಹಮ್ಮದ್ಪುರ ಮಾಫಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಖುರ್ಷಿದ್ (18) ಕೊಲೆಯಾದ ಗಾಯಕಿ ಫರ್ಮಾನಿ ನಾಜ್ ಸೋದರ. ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿ ಹಿಂದಿರುಗುವಾಗ ಸಾಲ್ವಾ ರಸ್ತೆ ಬಳಿ ಕೆಲವು ಬೈಕ್ ಸವಾರರು ಖುರ್ಷಿದ್ ಅವರನ್ನು ಸುತ್ತುವರಿದು ಚಾಕು ತೋರಿಸಿದ್ದಾರೆ. ಖುರ್ಷಿದ್ ವಿರುದ್ಧ ಯಾವುದೇ ಪ್ರಚೋದನೆ ಇಲ್ಲದಿದ್ದರೂ ಆತನಿಗೆ ಚಾಕುವಿನಿಂದ ಇರಿದ ಬಳಿಕ ಆ ಗ್ಯಾಂಗ್ ಸ್ಥಳದಿಂದ ಪರಾರಿಯಾಗಿದೆ. ಕೂಡಲೇ ಖುರ್ಷಿದ್ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ಗ್ರಾಮೀಣ) ಅತುಲ್ ಶ್ರೀವಾಸ್ತವ ತಿಳಿಸಿದ್ದಾರೆ. ಈ ಘಟನೆ ಸಂಬಂಧ ರತನಪುರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭಿಸಲಾಗಿದೆ. 2022ರಲ್ಲಿ ನಾಜ್ ಹಾಡಿರುವ ಭಗವಾನ್ ಶಿವನನ್ನು ಸ್ತುತಿಸುವ ಭಕ್ತಿಗೀತೆ ‘ಹರ್ ಹರ್ ಶಂಭು’ ಅನ್ನು ದೇವಬಂದ್ನ ಧರ್ಮಗುರುಗಳು “ಅನ್-ಇಸ್ಲಾಮಿಕ್” ಮತ್ತು “ಹರಾಮ್” (ನಿಷೇಧಿತ) ಎಂದು ಕರೆದಿದ್ದರು.
