ನ್ಯೂಯಾರ್ಕ್: ತಮಗೆ ಅಕ್ರಮ ಸಂಬಂಧ ಇತ್ತು ಎಂದು ಅಮೆರಿಕ ಅಧ್ಯಕ್ಷೀಯ ಸ್ಥಾನದ ಅಭ್ಯರ್ಥಿ ಕಮಲಾ ಹ್ಯಾರಿಸ್ ಪತಿ ಒಪ್ಪಿಕೊಂಡಿದ್ದಾರೆ. ಯುಎಸ್ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರ ಪತಿ ಡೌಗ್ ಎಂಹಾಫ್ ಅವರು ಮೊದಲ ಪತ್ನಿಗೆ ಮೋಸ ಮಾಡಿದ್ದನ್ನು ಒಪ್ಪಿಕೊಂಡಿದ್ದಾರೆ. ಮೊದಲ ಮದುವೆ ಆಗಿದ್ದ ವೇಳೆ ನಾನು ಅಕ್ರಮ ಸಂಬಂಧ ಹೊಂದಿದ್ದೆ ಎಂದಿದ್ದಾರೆ. ಎಂಹಾಫ್ ತನ್ನ ಮಗಳ ಶಿಕ್ಷಕಿ ಜೊತೆ ವಿವಾಹೇತರ ಸಂಬಂಧವನ್ನು ಹೊಂದಿದ್ದು, ಇದು ಅವರ ಮೊದಲ ಮದುವೆ ಮುರಿದು ಬೀಳಲು ಕಾರಣವಾಯಿತು. ನನ್ನ ಮೊದಲ ಮದುವೆಯ ಸಮಯದಲ್ಲಿ, ನನ್ನ ನಡವಳಿಕೆಯಿಂದಾಗಿ ನಾನು ಮತ್ತು ಕೆರ್ಸ್ಟಿನ್ ಕೆಲವು ಕಠಿಣ ಸಮಯ ಎದುರಿಸಿದೆವು ಎಂದಿದ್ದಾರೆ. ಈ ನಡುವೆ ಎಂಹಾಫ್ ಅವರ ಮೊದಲ ಪತ್ನಿ ಕೆರ್ಸ್ಟಿನ್ ಕೂಡ ಶನಿವಾರ ಹೇಳಿಕೆಯಲ್ಲಿ ಅವರನ್ನು ಸಮರ್ಥಿಸಿಕೊಂಡಿದ್ದಾರೆ. ಡೌಗ್ ಮತ್ತು ನಾನು ಹಲವು ವರ್ಷಗಳ ಹಿಂದೆ ವಿವಿಧ ಕಾರಣಗಳಿಗಾಗಿ ನಮ್ಮ ಮದುವೆಯನ್ನು ಕೊನೆಗೊಳಿಸಲು ನಿರ್ಧರಿಸಿದೆವು. ಅವರು ನಮ್ಮ ಮಕ್ಕಳಿಗೆ ಉತ್ತಮ ತಂದೆಯಾಗಿದ್ದಾರೆ. ನನಗೆ ಉತ್ತಮ ಸ್ನೇಹಿತನಾಗಿ ಮುಂದುವರೆದಿದ್ದಾರೆ ಎಂದು ತಿಳಿಸಿದ್ದಾರೆ.
