ಅಂಕೆ ಮೀರಿದ ಭಂಡತನಕ್ಕೆ ಮುಖ್ಯಮಂತ್ರಿ ನೀವೇ ಅತ್ಯುತ್ತಮ ಉದಾಹರಣೆ’- ಹೆಚ್‌ಡಿಕೆ ಟೀಕೆ

ಬೆಂಗಳೂರು: ರಾಷ್ಟ್ರಪತಿಗಳ ವಿರುದ್ಧ ಏಕವಚನ ಪ್ರಯೋಗ ಮಾಡಿ ಬಳಿಕ ವಿಷಾದ ವ್ಯಕ್ತಪಡಿಸಿದ ಸಿಎಂ ಸಿದ್ದರಾಮಯ್ಯ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಎಕ್ಸ್‌ನಲ್ಲಿ ಟೀಟ್ವ್‌ ಮೂಲಕ ವಾಗ್ದಾಳಿ ನಡೆಸಿರುವ ಅವರು, ಸಿದ್ದರಾಮಯ್ಯ ಅವರನ್ನು ಶಿಷ್ಟಾಚಾರಗೆಟ್ಟ ಮುಖ್ಯಮಂತ್ರಿ ಎಂದು ಟೀಕಿಸಿದ್ದಾರೆ.ಅಂಕೆ ಮೀರಿದ ಭಂಡತನಕ್ಕೆ ಮುಖ್ಯಮಂತ್ರಿ ನೀವೇ ಅತ್ಯುತ್ತಮ ಉದಾಹರಣೆ ಸಿದ್ದರಾಮಯ್ಯನವರೇ. ಭಾವುಕನಾಗಿ ಮಾತನಾಡುವ ಭರದಲ್ಲಿ ಗೌರವಾನ್ವಿತ ರಾಷ್ಟ್ರಪತಿಗಳನ್ನು ಏಕವಚನದಲ್ಲಿ ಸಂಬೋಧಿಸಿದೆ ಎಂದು ನೀವು ಕೊಟ್ಟಿರುವ ಸಮಜಾಯಿಷಿ ಮೊಸಳೆಯನ್ನೂ ನಾಚಿಸುವಂತಿದೆ. ಗ್ರಾಮೀಣ ಸೊಗಡಿನ ವ್ಯಕ್ತಿತ್ವ ನನ್ನದು. ನಾನು ಮಾತನಾಡುವುದೇ ಹಾಗೆ ಎಂದು ನೀವು ಸಮರ್ಥಿಸಿಕೊಳ್ಳುತ್ತೀರಿ. ಸಮರ್ಥನೆಗೂ ಒಂದು ಅಳತೆ, ಗೌರವ ಇರುತ್ತದೆ. ಅದಾವುದನ್ನೂ ನೀವು ಲೆಕ್ಕಕ್ಕೇ ಇಟ್ಟಿಲ್ಲ ಹೌದಲ್ಲವೇ? ಎಂದು ಕಿಡಿಕಾರಿದರು.

2ನೇ ಬಾರಿ ಸಿಎಂ ಆಗಿ ಎಲ್ಲಾ ರೀತಿಯ ಶಿಷ್ಟಾಚಾರದ ಸುಖ ಅನುಭವಿಸುತ್ತಿದ್ದೀರಿ ಮತ್ತು ಪಾಲಿಸುತ್ತಿದ್ದೀರಿ ಸರಿ. ಆದರ ಭಾಷೆ ವಿಚಾರದಲ್ಲಿ ನೀವು ಯಾಕೆ ಶಿಷ್ಟಾಚಾರ ಕಲಿತಿಲ್ಲ, ಪಾಲಿಸುತ್ತಿಲ್ಲ? ನಿಮ್ಮ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರಿಗೆ ಏಕವಚನ ಪ್ರಯೋಗಿಸುವಿರಾ? ಈ ಸೋಗಲಾಡಿತನವನ್ನು ಅರ್ಥ ಮಾಡಿಕೊಳ್ಳದಷ್ಟು ಮುಗ್ಧರೇ ನಮ್ಮ ಜನರು ಸಿದ್ದರಾಮಯ್ಯನವರೇ? ನಿನ್ನೆ ದಿನ ಶೋಷಿತರ ಜಾಗೃತಿ ಸಮಾವೇಶದಲ್ಲಿ ನಿಮ್ಮ ಭಾಷಣದಲ್ಲಿ ಭಾವುಕತೆ, ಮುಗ್ಧತೆ ಇತ್ತೇ? ಸುಳ್ಳು ಹೇಳುವುದಕ್ಕೂ ಸಂಕೋಚ ಬೇಡವೇ? ನಿಮ್ಮ ಭಾಷಣ ದುರಾಹಂಕಾರದ ಪರಮಾವಧಿ ಮತ್ತು ಆ ಸಮಾವೇಶದ ಕರ್ತೃ, ಕರ್ಮ, ಕ್ರಿಯೆ ಎಲ್ಲವೂ ನೀವೇ. ಹೌದೋ ಅಲ್ಲವೋ ಎಂದು ಪ್ರಶ್ನಿಸಿದರು.

Advertisement

ದೇಶದ ಅತ್ಯುನ್ನತ ಸ್ಥಾನದಲ್ಲಿರುವ ಗೌರವಾನ್ವಿತ ರಾಷ್ಟ್ರಪತಿಗಳ ಬಗ್ಗೆ, ಅದರಲ್ಲೂ ಮಹಿಳೆಯ ಬಗ್ಗೆ ಏಕವಚನ ಪ್ರಯೋಗಿಸುವಾಗ ಭಾವುಕತೆಯಲ್ಲಿ ನಿಮ್ಮ ವಿವೇಕ ಸತ್ತು ಹೋಗಿತ್ತಾ? ಎರಡು ಬಾರಿ ಸಿಎಂ ಆದವರು, ಡಿಸಿಎಂ, ಹಣಕಾಸು ಸಚಿವರೂ ಆಗಿದ್ದವರು, ವಕೀಲರೂ, ಸ್ವಯಂಘೋಷಿತ ಸಂವಿಧಾನ ತಜ್ಞರೂ ಆಗಿರುವ ನಿಮ್ಮಂತಹ ಪಂಡಿತರೇ ಭಾವುಕತೆಯಿಂದ ಬಾಯಿ ತಪ್ಪಿದರೆ ಹೇಗೆ? ಇನ್ನು ಆ ನಿಮ್ಮ ಭಾಷಣ ಅದನ್ನು ಭಾಷಣ ಎನ್ನಲು ಸಾಧ್ಯವೇ? ನಿಮ್ಮ ಭಾಷಣ ನಿಮ್ಮ ಹೃದಯದಲ್ಲಿ ತುಂಬಿದ್ದ ಅಸಹನೆಯ ನಂಜು. ಎಂದು ವಾಗ್ದಾಳಿ ನಡೆಸಿದರು.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement