ಕೊಪ್ಪಳ : ಹನುಮಂತನ ಜನ್ಮಸ್ಥಳ ಅಂಜನಾದ್ರಿ ಬೆಟ್ಟಕ್ಕೆ ಸಾಕಷ್ಟು ಜನ ಭಕ್ತರು ಆಗಮಿಸುತ್ತಾರೆ. ಇಲ್ಲಿಗೆ ಬರುವವರು ರಾಜ್ಯ ದೇಶ ಮಾತ್ರವಲ್ಲ ಹೊರ ದೇಶಗಳಿಂದಲೂ ಆಗಮಿಸುತ್ತಾರೆ. ಸದ್ಯ ದೇವಸ್ಥಾನದ ಹುಂಡಿಯಲ್ಲಿ ಪ್ರಪಂಚದ ವಿವಿಧ ದೇಶದ ನಾಣ್ಯ ಪತ್ತೆ ಆಗುವುದು ಸಾಮಾನ್ಯ. ಆದರೆ, ಇದೇ ಮೊದಲ ಬಾರಿಗೆ ಕಾಣಿಕೆ ಪೆಟ್ಟಿಗೆಯಲ್ಲಿ ಪಾಕಿಸ್ತಾನದ ನಾಣ್ಯ ಪತ್ತೆಯಾಗಿದೆ. ಕೊಪ್ಪಳದ ಗಂಗಾವತಿ ತಾಲೂಕಿನ ಚಿಕ್ಕರಾಂಪೂರ ಗ್ರಾಮದಲ್ಲಿನ ಅಂಜನಾದ್ರಿ ದೇವಸ್ಥಾನಕ್ಕೆ ಬರುವ ವಿದೇಶಿಗರು ತಮ್ಮ ದೇಶದ ನಾಣ್ಯಗಳನ್ನು ಕಾಣಿಕೆ ಪೆಟ್ಟಿಗೆಯಲ್ಲಿ ಹಾಕುವುದು ಸಾಮಾನ್ಯ. ಇದೇ ಮೊದಲ ಬಾರಿಗೆ ಪಾಕಿಸ್ತಾನದ ನಾಣ್ಯವೊಂದು ಹುಂಡಿಯಲ್ಲಿ ಪತ್ತೆಯಾಗಿದ್ದು ಕುತೂಹಲಕ್ಕೆ ಕಾರಣವಾಗಿದೆ. ಸಹಾಯಕ ಆಯುಕ್ತ ಕ್ಯಾಪ್ಟನ್ ಮಹೇಶ ಮಾಲಗಿತ್ತಿ ಸೂಚನೆ ಮೇರೆಗೆ, ತಹಸೀಲ್ದಾರ್ ಯು. ನಾಗರಾಜ ನೇತೃತ್ವದಲ್ಲಿ ಕಂದಾಯ ಇಲಾಖೆ ಹಾಗೂ ದೇವಸ್ಥಾನ ಸಿಬ್ಬಂದಿ ಮಂಗಳವಾರ ಕಾಣಿಕೆ ಪೆಟ್ಟಿಗೆ ಎಣಿಕೆ ನಡೆಸಿದರು. ಈ ಸಂದರ್ಭದಲ್ಲಿ ಪಾಕಿಸ್ತಾನ, ಮೊರಾಕ್ಕೊ, ಶ್ರೀಲಂಕಾ, ಅಮೆರಿಕಾ ಮತ್ತು ನೇಪಾಳದ ನಾಣ್ಯಗಳು ಪತ್ತೆಯಾಗಿವೆ. ಪಾಕಿಸ್ತಾನದ ಐದು ರೂಪಾಯಿ ಮುಖಬೆಲೆಯ ನಾಣ್ಯ, ಯುನೈಟೆಡ್ ಸ್ಟೇಟ್ ಆಫ್ ಆಮೆರಿಕದ ಒಂದು ಸೆಂಟ್, ಮೊರಾಕ್ಕೊದಾ ಒಂದು ದಿರಮ್, ನೇಪಾಳದ ಒಂದು ನಾಣ್ಯ ಹಾಗೂ ಶ್ರೀಲಂಕಾದ ಐದು ರೂಪಾಯಿ ನಾಣ್ಯಗಳು ಹುಂಡಿಯಲ್ಲಿ ಪತ್ತೆಯಾಗಿವೆ. ಕಳೆದ ಮಾರ್ಚ್ 27ರಿಂದ ಇಲ್ಲಿವರೆಗೂ ಅಂದರೆ ಮೇ 21 ರ ವರೆಗೆ ಐದು ವಿದೇಶಿ ನಾಣ್ಯ ಸೇರಿ ಅಂಜನಾದ್ರಿ ದೇವಸ್ಥಾನದ ಹುಂಡಿಯಲ್ಲಿ ಒಟ್ಟು 56 ದಿನಗಳಲ್ಲಿ 31.21 ಲಕ್ಷ ಮೊತ್ತದ ಹಣ ಸಂಗ್ರಹವಾಗಿದೆ. ಪ್ರತಿ ತಿಂಗಳು ಅಂಜನಾದ್ರಿಯ ಕಾಣಿಕೆ ಹುಂಡಿಯ ಆದಾಯ ಸರಾಸರಿ 18 ರಿಂದ 20 ಲಕ್ಷ ರೂಪಾಯಿ ಇದೆ.