ಬೆಂಗಳೂರು: ರೈತರು ಅಕ್ರಮವಾಗಿ ಕಾಲುವೆಗಳಲ್ಲಿ ಪಂಪ್ ಸೆಟ್ ಅಳವಡಿಸಿ ನೀರು ಎತ್ತುತ್ತಿರುವುದರಿಂದ ಕೊನೆಯ ಭಾಗದ ಹಳ್ಳಿಗಳಿಗೆ ನೀರು ತಲುಪುತ್ತಿಲ್ಲ. ಇದನ್ನು ತಡೆಯಲು ಪ್ರಸಕ್ತ ಅಧಿವೇಶನದಲ್ಲಿ ಅಗತ್ಯವಾದ ಮಸೂದೆ ಮಂಡಿಸುವುದಾಗಿ ಬೃಹತ್ ನೀರಾವರಿ ಸಚಿವರಾದ ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ವಿಧಾನಸಭೆಯಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಸದಸ್ಯ ಜಗದೀಶ್ ಶಿವಣ್ಣ ಗುಡಗಂಟಿ ಅವರ ಪ್ರಶ್ನೆಗೆ ಉತ್ತರ ನೀಡಿದ ಡಿಸಿಎಂ, ಮಂಡ್ಯ, ಹಾಸನ, ಬಾಗಲಕೋಟೆ ಸೇರಿದಂತೆ ರಾಜ್ಯದ ನೀರಾವರಿ ಪ್ರದೇಶಗಳ ಕೊನೆಯ ಭಾಗಗಳಿಗೆ ನೀರು ತಲುಪುತ್ತಿಲ್ಲ. ರೈತರು ಅಕ್ರಮವಾಗಿ ಕಾಲುವೆಗಳಿಗೆ ಪಂಪ್ ಸೆಟ್ ಅಳವಡಿಸಿ ನೀರು ಎತ್ತುತ್ತಿದ್ದಾರೆ. ಯೋಜನೆಯ ಕೊನೆಯ ಭಾಗದ ಹಳ್ಳಿಗಳಿಗೆ ನೀರು ತಲುಪುತ್ತಿಲ್ಲ. ಏತ ನೀರಾವರಿ ಮಾಡಿದರೂ ಕೂಡ ಶೇಕಡ 50ರಷ್ಟು ನೀರು ಸಹ ಕೊನೆ ಭಾಗಕ್ಕೆ ತಲುಪುತ್ತಿಲ್ಲ. ಇದನ್ನು ತಡೆಯಲು ವಾರದೊಳಗೆ ಮಸೂದೆ ಸಿದ್ಧಪಡಿಸಿ ಮಂಡಿಸಲಾಗುವುದು. ಎಲ್ಲಾ ಸದಸ್ಯರು ಪರಾಮರ್ಶಿಸಿ ಒಪ್ಪಿಗೆ ನೀಡಿದರೆ ಜಾರಿಗೊಳಿಸುವುದಾಗಿ ಹೇಳಿದ್ದಾರೆ.
ನಾವು ನೀರನ್ನು ಏತ ನೀರಾವರಿ ಮೂಲಕ ನಲವತ್ತು ಕಿಲೋಮೀಟರ್ ವರೆಗೆ ಹರಿಸುತ್ತೇವೆ. ಆ ನೀರನ್ನೇ 10 ಕಿ.ಮೀಗಟ್ಟಲೇ ಪಂಪ್ ಮಾಡುತ್ತಿದ್ದಾರೆ. ಕೆಆರ್ಎಸ್ ನೀರು ಮಳವಳ್ಳಿಗೆ ಹೋಗುವುದಿಲ್ಲ. ಕಾಲುವೆ ಮಾಡಿ 20 ವರ್ಷಗಳಾದರೂ ಗದಗ ಜಿಲ್ಲೆಗೆ ನೀರು ತಲುಪಿಲ್ಲ. ಎಲ್ಲರೂ ಸಹಕಾರ ನೀಡಿದಲ್ಲಿ ನೀರನ್ನು ರಕ್ಷಿಸಿ ಕೊನೆಯ ಭಾಗದ ರೈತರಿಗೂ ತಲುಪುವ ವ್ಯವಸ್ಥೆ ಮಾಡಲು ಕಾನೂನು ತರಲಾಗುವುದು ಎಂದು ಹೇಳಿದ್ದಾರೆ.


































