ಪಾಟ್ನಾ : ಬಿಹಾರ ವಿದ್ಯುತ್ ಸಚಿವಾಲಯದಲ್ಲಿ ನಡೆದಿದೆ ಎನ್ನಲಾದ ಟೆಂಡರ್ ಹಗರಣ ಪ್ರಕರಣಕ್ಕೆ ಸಬಂಧಿಸಿದಂತೆ ಬಿಹಾರದ ಹಿರಿಯ ಐಎಎಸ್ ಅಧಿಕಾರಿ, ಆರ್ಜೆಡಿ ಮಾಜಿ ಶಾಸಕರೊಬ್ಬರನ್ನ ಇಡಿ ಬಂಧಿಸಿದೆ.
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಸೆಕ್ಷನ್ಗಳ ಅಡಿಯಲ್ಲಿ ಇಬ್ಬರನ್ನು ಬಂಧಿಸಲಾಗಿದೆ. ಸಂಜೀವ್ ಹನ್ಸ್ ಅವರನ್ನ ಪಾಟ್ನಾದಲ್ಲಿ ಮತ್ತು ಗುಲಾಬ್ ಯಾದವ್ ಅವರನ್ನ ದೆಹಲಿಯಲ್ಲಿ ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ. ಬಿಹಾರದ ವಿದ್ಯುತ್ ಸಚಿವಾಲಯದ ಟೆಂಡರ್ ಹಗರಣದಲ್ಲಿ ಭಾಗಿಯಾಗಿದ್ದರುಎಂಬ ಆರೋಪ ಇವರ ಮೇಲಿದೆ.
ಬಿಹಾರ ಕೇಡರ್ ಐಎಎಸ್ ಅಧಿಕಾರಿ ಸಂಜೀವ್ ಹನ್ಸ್ ರಾಜ್ಯ ವಿದ್ಯುತ್ ಇಲಾಖೆಗೆ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು. ಕಾನೂನು ಜಾರಿ ನಿರ್ದೇಶನಾಲಯ ಅವರ ನಿವಾಸದ ಮೇಲೆ ಮೊದಲು ದಾಳಿ ನಡೆಸಿತ್ತು. ಶೋಧ ಕಾರ್ಯಾಚರಣೆ ಬಳಿಕ ಅವರನ್ನು ಸಾಮಾನ್ಯ ಆಡಳಿತ ವಿಭಾಗಕ್ಕೆ ಆಗಸ್ಟ್ನಲ್ಲಿ ವರ್ಗಾಯಿಸಲಾಗಿತ್ತು. ಝಂಜಾರ್ಪುರ ಮಾಜಿ ಶಾಸಕ ಗುಲಾಬ್ ಯಾದವ್, ಹನ್ಸ್ ಅವರ ನಿಕಟವರ್ತಿ ಎಂದು ಮೂಲಗಳು ತಿಳಿಸಿವೆ.
ಎಫ್ಐಆರ್ನಲ್ಲಿ ಹಣ ದುರುಪಯೋಗ, ಸರ್ಕಾರಿ ಉದ್ಯೋಗ ಕೊಡಿಸುವ ನೆಪದಲ್ಲಿ ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪವೂ ಹನ್ಸ್ ಮೇಲಿತ್ತು. ಆದರೆ ಪಾಟ್ನಾ ಹೈಕೋರ್ಟ್ ಈ ಪ್ರಕರಣವನ್ನು ಕಳೆದ ಆಗಸ್ಟ್ನಲ್ಲಿ ವಜಾಗೊಳಿಸಿತ್ತು.