ಮುಂಬೈ: ಬಾಲಿವುಡ್‌ನ ಖ್ಯಾತ ನಟಿ ಜೀನತ್ ಅಮಾನ್ ಅವರ ಒಟಿಟಿ ಚೊಚ್ಚಲ ಸರಣಿ ‘ಶೋ ಸ್ಟಾಪರ್’ ಕುರಿತ ವಿವಾದ ನಿಲ್ಲುತ್ತಿಲ್ಲ. ಕೆಲ ದಿನಗಳ ಹಿಂದೆಯಷ್ಟೇ ಕಾರ್ಯಕ್ರಮ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದೆ ಎಂಬ ಸುದ್ದಿ ಬಂದಿತ್ತು. ಇದೀಗ ಈ ಶೋನಲ್ಲಿ ಕೆಲಸ ಮಾಡುತ್ತಿರುವ ಖ್ಯಾತ ಕಿರುತೆರೆ ನಟಿ ದಿಗಂಗನಾ ಸೂರ್ಯವಂಶಿ ವಿರುದ್ಧ ವೆಬ್ ಸರಣಿಯ ನಿರ್ದೇಶಕ ಮನೀಶ್ ಹರಿಶಂಕರ್ ಅವರು ದೂರು ದಾಖಲಿಸಿದ್ದಾರೆ ಎಂಬ ವಿಚಾರ ಬಾಲಿವುಡ್ನಿಂದ ಬರುತ್ತಿದೆ. ಬಿಡುಗಡೆಗೂ ಮುನ್ನವೇ ಒಂದಲ್ಲಾ ಒಂದು ವಿವಾದದಲ್ಲಿ ಈ ಸರಣಿ ಸಿಲುಕಿಕೊಂಡಿದೆ. ಮನೀಶ್ ಅವರು ಐಪಿಸಿ ಸೆಕ್ಷನ್ 420 ಮತ್ತು 406ರ ಅಡಿಯಲ್ಲಿ ನಟಿ ದಿಗಂಗನಾ ವಿರುದ್ಧ ಪೊಲೀಸ ಠಾಣೆಯಲ್ಲಿ ದೂರು ದಾಖಲಿಸಿದ್ದು, ವಂಚನೆ ಮತ್ತು ಕ್ರಿಮಿನಲ್ ನಂಬಿಕೆಯ ಉಲ್ಲಂಘನೆಯ ಆರೋಪ ಮಾಡಿದ್ದಾರೆ ಎನ್ನಲಾಗಿದೆ. ಅಕ್ಷಯ್ ಕುಮಾರ್, ಶಾರೂಖ್ ಖಾನ್, ಮತ್ತು ಸಲ್ಮಾನ್ ಖಾನ್ ಅವರಂತಹ ಸ್ಟಾರ್ಗಳ ಪರಿಚಯ ಇರುವುದಾಗಿ ಹೇಳಿ ಅವರನ್ನು ನಿರೂಪಕರನ್ನಾಗಿ ಕರೆತರುವುದಾಗಿ ನಟಿ ಹೇಳಿದ್ದರು ಎಂದು ದೂರಿನಲ್ಲಿ ಹೇಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಅಕ್ಷಯ್ ಕುಮಾರ್ ಹೆಸರಿನಲ್ಲಿ ಹಣ ಪಡೆದಿದ್ದಾರೆ. ಅಲ್ಲದೆ ಅಕ್ಷಯ್ ಹೆಸರಲ್ಲಿ 6 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಇದಲ್ಲದೇ ಮಾಧ್ಯಮಗಳಲ್ಲಿ ಕಾರ್ಯಕ್ರಮದ ಬಗ್ಗೆ ತಪ್ಪು ಹೇಳಿಕೆಗಳನ್ನು ನೀಡಿ ಯೋಜನೆಯ ಪ್ರತಿಷ್ಠೆಗೆ ಧಕ್ಕೆ ತಂದಿದ್ದಾರೆ ಎಂದು ನಟ ರಾಕೇಶ್ ಬೇಡಿ ಹಾಗೂ ದಿಗಂಗನಾ ಅವರ ಫ್ಯಾಶನ್ ಡಿಸೈನರ್ ಕೃಷ್ಣ ಪರ್ಮಾರ್ ಅವರಿಗೆ ಎಂಎಚ್ ಫಿಲ್ಮ್ಸ್ ಮಾನನಷ್ಟ ನೋಟಿಸ್ ಕಳುಹಿಸಿದೆ. ದಿಗಂಗನಾ ದೊಡ್ಡ ಮೊತ್ತದ ಹಣವನ್ನು ಸುಲಿಗೆ ಮಾಡಲು ಪ್ರಯತ್ನಿಸಿದರು. ಬೇಡಿಕೆಗಳನ್ನು ಈಡೇರಿಸದಿದ್ದರೆ ಭೀಕರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ನಿರ್ದೇಶಕ ಮನೀಶ್ ಹರಿಶಂಕರ್ ಅವರಿಗೆ ಬೆದರಿಕೆ ಹಾಕಿದ್ದಾರೆ ಎಂದು ಪ್ರಕರಣಕ್ಕೆ ಸಂಬಂಧಿಸಿದ ವಕೀಲರ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.