ಬೆಂಗಳೂರು: ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಲಭ್ಯ ಇರುವ ಹುದ್ದೆಗಳಿಗೆ ಅತಿಥಿ ಉಪನ್ಯಾಸಕರನ್ನು ಕೌನ್ಸೆಲಿಂಗ್ ಮೂಲಕ ನೇಮಕ ಮಾಡಿಕೊಳ್ಳುವಂತೆ ಕಾಲೇಜು ಶಿಕ್ಷಣ ಇಲಾಖೆ ಸೂಚನೆ ನೀಡಿದೆ.
ಆಗಸ್ಟ್ 31 ರಂದು ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ. ಸೆಪ್ಟಂಬರ್ 7 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಸೆಪ್ಟೆಂಬರ್ 8ರಂದು ತಾತ್ಕಾಲಿಕ ಮೆರಿಟ್ ಪಟ್ಟಿ ಪ್ರಕಟಿಸಲಾಗುವುದು. ಸೆ. 9 ಮತ್ತು 10 ರಂದು ಅರ್ಜಿ ತಿದ್ದುಪಡಿಗೆ ಅವಕಾಶವಿದೆ. ಸೆ. 11ರಂದು ಕಾರ್ಯಭಾರ ಪ್ರಕಟಿಸಲಿದ್ದು, ಸೆ. 17ರಂದು ಮೆರಿಟ್ ಪಟ್ಟಿ ಅನ್ವಯ ಕಾಲೇಜು ಕೌನ್ಸೆಲಿಂಗ್ ನಡೆಸಲಾಗುವುದು.
ಕಳೆದ ವರ್ಷ ಕರ್ತವ್ಯ ನಿರ್ವಹಿಸಿದ ಅಭ್ಯರ್ಥಿಗಳು ಆಯಾ ಕಾಲೇಜಿನಲ್ಲಿಯೇ ಮುಂದುವರೆಯಲು ಬಯಸಿದಲ್ಲಿ ಕೌನ್ಸೆಲಿಂಗ್ ನಡೆಸದೆ ಮುಂದುವರಿಸಲು ಅವಕಾಶ ಕಲ್ಪಿಸುವಂತೆ ನಿರ್ದೇಶನ ನೀಡಲಾಗಿದೆ. ಅಂತಹ ಅಭ್ಯರ್ಥಿಗಳು ಕಂಟಿನ್ಯೂಷನ್ ಆಪ್ಷನ್ ಆಯ್ಕೆ ಮಾಡುವ ಮೊದಲು ಸಂಬಂಧಿಸಿದ ಕಾಲೇಜು ಪ್ರಾಂಶುಪಾಲರಿಂದ ಕಾರ್ಯಭಾರ ಮಾಹಿತಿ ಪಡೆದುಕೊಳ್ಳುವಂತೆ ಆಯುಕ್ತರು ತಿಳಿಸಿದ್ದಾರೆ.
ಮೊದಲನೇ ಸುತ್ತಿನ ಕೌನ್ಸೆಲಿಂಗ್ ನಂತರವೂ ಉಳಿಕೆಯಾಗುವ ಹುದ್ದೆಗಳಿಗೆ ಮುಂದಿನ ಸುತ್ತಿನಲ್ಲಿ ಆಯ್ಕೆ ಮಾಡಿಕೊಳ್ಳಬಹುದು. ಯುಜಿಸಿ ನಿಗದಿ ಮಾಡಿದ ವಿದ್ಯಾರ್ಹತೆಗೆ ಅನುಗುಣವಾಗಿ ಆಯ್ಕೆ ಪ್ರಕ್ರಿಯೆ ನಡೆಸಬೇಕು. ಸೇವಾವಧಿ ಮತ್ತು ವಿದ್ಯಾರ್ಹತೆಗೆ ತಕ್ಕಂತೆ ಗೌರವಧನ ನಿಗದಿಪಡಿಸಬೇಕು. ಕನಿಷ್ಠ 31 ಸಾವಿರ ರೂ.ಗಳಿಂದ ಗರಿಷ್ಠ 40 ಸಾವಿರ ರೂಪಾಯಿವರೆಗೆ ಗೌರವಧನ ನಿಗದಿಪಡಿಸಲಾಗಿದೆ.
ಕಲಾ, ವಾಣಿಜ್ಯ, ಭಾಷಾ ವಿಷಯಗಳು ಗರಿಷ್ಠ 15 ಗಂಟೆ, ವಿಜ್ಞಾನ ವಿಷಯ ಪ್ರಾಯೋಗಿಕ ತರಗತಿಗಳಿರುವ ವಿಷಗಳಿಗೆ ಗರಿಷ್ಠ 19 ಗಂಟೆ ಕಾರ್ಯಾಭಾರ ಹಂಚಿಕೆ ಮಾಡಲಾಗುತ್ತದೆ. ನಿಗದಿತ ಅವಧಿಗಿಂತ ಕಡಿಮೆ ಕಾರ್ಯಭಾರ ಇದ್ದಲ್ಲಿ ಕಾರ್ಯಭಾರ ಎಷ್ಟು ಗಂಟೆಗಳ ಕಾಲ ಲಭ್ಯವಿದೆಯೋ ಅದಕ್ಕೆ ಅನುಗುಣವಾಗಿ ಗೌರವಧನ ಪರಿಗಣಿಸಬೇಕೆಂದು ಹೇಳಲಾಗಿದೆ.