ಅತಿಥಿ ಉಪನ್ಯಾಸಕರಿಗೆ 5ಸಾವಿರ ರೂ. ಗಳಿಂದ 8 ಸಾವಿರ ರೂ. ಗಳಷ್ಟು ಗೌರವಧನ ಹೆಚ್ಚಳಕ್ಕೆ ಸಿಎಂ ಸಮ್ಮತಿ

ಬೆಂಗಳೂರು: ಅತಿಥಿ ಉಪನ್ಯಾಸಕರಿಗೆ ಸೇವಾನುಭವದ ಆಧಾರದಲ್ಲಿ 5,000 ರೂ. ಗಳಿಂದ 8000 ರೂ. ಗಳಷ್ಟು ಗೌರವಧನ ಹೆಚ್ಚಳಕ್ಕೆ ಮುಖ್ಯಮಂತ್ರಿ ಒಪ್ಪಿಗೆ ಸೂಚಿಸಿದ್ದು ಮಾತ್ರವಲ್ಲದೆ ಇನ್ನಿತರ ಕೆಲವು ಸೌಲಭ್ಯಗಳನ್ನು ವಿಸ್ತರಿಸಿದ್ದಾರೆ.

ಅವರು ಇಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಮತ್ತು‌ ಮಾಜಿ ಎಂಎಲ್‌ಸಿ ಪುಟ್ಟಣ್ಣ ನೇತೃತ್ವದ ಅತಿಥಿ ಉಪನ್ಯಾಸಕರ ನಿಯೋಗದ ಜತೆ ಅವರ ಬೇಡಿಕೆಗಳ ಕುರಿತು ಚರ್ಚಿಸಿದರು.

ಅತಿಥಿ ಉಪನ್ಯಾಸಕರ ಬಗ್ಗೆ ನಮ್ಮ ಸರ್ಕಾರ ಮಾನವೀಯ ಕಾಳಜಿ ಹೊಂದಿದೆ. ಆದರೆ ಸೇವಾ ಭದ್ರತೆ ನೀಡಲು ಕಾನೂನು ತೊಡಕು ಇರುವುದರಿಂದ ಸಾಧ್ಯವಾಗುವುದಿಲ್ಲ. ವಿರೋಧ ಪಕ್ಷದ ನಾಯಕನಾಗಿದ್ದಾಗಲೂ ಅತಿಥಿ ಉಪನ್ಯಾಸಕರ ಪರವಾಗಿ ತಾವು ದನಿ ಎತ್ತಿ ವೇತನ ಹೆಚ್ಚಳಕ್ಕೆ ಒತ್ತಾಯಿಸಿದ್ದನ್ನು ಸ್ಮರಿಸಿಕೊಂಡ ಮುಖ್ಯಮಂತ್ರಿಗಳು, ಇದೀಗ ಎರಡೇ ವರ್ಷದೊಳಗೆ ನಮ್ಮ ಸರ್ಕಾರ ಮತ್ತೆ ನಿಮ್ಮ ವೇತನ ಹೆಚ್ಚಳಕ್ಕೆ ಮುಂದಾಗಿದೆ.ಸರ್ಕಾರ ಅತಿಥಿ ಉಪನ್ಯಾಸಕರ ಬೇಡಿಕೆಗಳನ್ನು ಅತ್ಯಂತ ಸಹಾನುಭೂತಿಯಿಂದ ಪರಿಗಣಿಸಿದೆ ಎಂದು ತಿಳಿಸಿದರು.

Advertisement

ಐದು ವರ್ಷಕ್ಕಿಂತ ಕಡಿಮೆ ಸೇವಾನುಭವ ಹೊಂದಿದವರಿಗೆ 5 ಸಾವಿರ ರೂ., 5 ರಿಂದ 10 ವರ್ಷದ ಸೇವಾನುಭವ ಹೊಂದಿದವರಿಗೆ 6 ಸಾವಿರ ರೂ., 10 ರಿಂದ 15 ವರ್ಷದ ಸೇವಾನುಭವ ಹೊಂದಿದವರಿಗೆ 7 ಸಾವಿರ ರೂ. ಹಾಗೂ 15 ವರ್ಷಕ್ಕಿಂತ ಹೆಚ್ಚಿನ ಸೇವಾನುಭವ ಹೊಂದಿದವರಿಗೆ 8 ಸಾವಿರ ರೂ. ಗಳಷ್ಟು ಗೌರವಧನ ಹೆಚ್ಚಳ ಮಾಡಲು ಸರ್ಕಾರ ಸಿದ್ಧವಿದೆ ಎಂದು ತಿಳಿಸಿದರು.

ಇದರೊಂದಿಗೆ ಅತಿಥಿ ಉಪನ್ಯಾಸಕರ ಆರೋಗ್ಯದ ದೃಷ್ಟಿಯಿಂದ ವಾರ್ಷಿಕ 5 ಲಕ್ಷ ರೂ. ಗಳ ಆರೋಗ್ಯ ವಿಮಾ ಸೌಲಭ್ಯ ಅನುಷ್ಠಾನ, ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ, 60 ವರ್ಷ ಮೀರಿದ ನಂತರದಲ್ಲಿ ಭದ್ರತಾ ರೂಪದಲ್ಲಿ ಗರಿಷ್ಠ 5 ಲಕ್ಷ ರೂ. ಇಡಿಗಂಡು ನೀಡುವುದು, ವಾರಕ್ಕೆ 15 ಗಂಟೆಗೂ ಹೆಚ್ಚಿನ ಕಾರ್ಯಭಾರ ಹೊಂದಿರುವ ಅತಿಥಿ ಉಪನ್ಯಾಸಕರಿಗೆ ಮಾಸಿಕ 1 ದಿನ ವೇತನ ಸಹಿತ ರಜೆ ನೀಡುವುದು ಹಾಗೂ 3 ತಿಂಗಳ ವೇತನ ಸಹಿತ ಮಾತೃತ್ವ ರಜೆ ನೀಡಲು ಮುಖ್ಯಮಂತ್ರಿಗಳು ಒಪ್ಪಿಗೆ ಸೂಚಿಸಿದರು.

ಇದರೊಂದಿಗೆ ನೇಮಕಾತಿಯಲ್ಲಿ ಅವರ ಸೇವಾನುಭವ ಆಧರಿಸಿ, ವೈಟೇಜ್‌ ನೀಡುವುದು, ಅತಿಥಿ ಉಪನ್ಯಾಸಕರು ಕಾರ್ಯನಿರ್ವಹಿಸುತ್ತಿದ್ದ ಸ್ಥಳದಲ್ಲಿಯೇ ಕಾರ್ಯಭಾರವಿದ್ದಲ್ಲಿ, ನಂತರದ ವರ್ಷವೂ ಅಲ್ಲಿಯೇ ಅವರ ಸೇವೆಯನ್ನು ಮುಂದುವರೆಸುವುದು ಸೇರಿದಂತೆ ಕೌನ್ಸೆಲಿಂಗ್‌ ಪ್ರಕ್ರಿಯೆ ಸರಳೀಕರಣಗೊಳಿಸಲು ಸಹ ಸಮ್ಮತಿಸಿ, ಕೂಡಲೇ ಪ್ರತಿಭಟನೆಯನ್ನು ಹಿಂದಕ್ಕೆ ಪಡೆದು ಕರ್ತವ್ಯಕ್ಕೆ ಹಾಜರಾಗಯವಂತೆ ಪ್ರತಿಭಟನಾನಿರತ ಅತಿಥಿ ಉಪನ್ಯಾಸಕರಿಗೆ ಮನವಿ ಮಾಡಿದರು.

ಸಭೆಯಲ್ಲಿ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್‌, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಕೆ. ಗೋವಿಂದರಾಜು, ಮಾಜಿ ವಿಧಾನ‌ ಪರಿಷತ್ ಸದಸ್ಯ ಪುಟ್ಟಣ್ಣ , ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್‌, ಉನ್ನತ ಶಿಕ್ಷಣ ಇಲಾಖೆ ಕಾರ್ಯದರ್ಶಿ ಎಂ.ಎಸ್. ಶ್ರೀಕರ್‌, ಉನ್ನತ ಶಿಕ್ಷಣ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಜಿ. ಜಗದೀಶ್‌ ಮತ್ತು ಇತರ ಹಿರಿಯ ಅಧಿಕಾರಿಗಳು, ಅತಿಥಿ ಉಪನ್ಯಾಸಕರ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement