ನವದೆಹಲಿ : ಭಾರತವೀಗ ಅತ್ಯಂತ ಸುಧಾರಿತ ಸ್ನೈಪರ್ ರೈಫಲ್ ರಫ್ತುದಾರ ದೇಶವೆಂಬ ಖ್ಯಾತಿಯನ್ನು ಗಿಟ್ಟಿಸಿಕೊಂಡಿದೆ. ಬೆಂಗಳೂರು ಮೂಲದ ಸಣ್ಣ ಶಸ್ತ್ರಾಸ್ತ್ರ ತಯಾರಕ ಕಂಪನಿಯಾಗಿರುವ ಎಸ್‌ಎಸ್‌ಎಸ್ ಡಿಫೆನ್ಸ್ 338 ಲಪುವಾ ಮ್ಯಾಗ್ನಮ್ ಕ್ಯಾಲಿಬರ್ ಸ್ನೈಪರ್ ರೈಫಲ್ ಪೂರೈಕೆಗಾಗಿ ಸ್ನೇಹಪರ ದೇಶಗಳ ಜತೆ ಮೆಗಾ ರಫ್ತು ಒಪ್ಪಂದ ಮಾಡಿಕೊಂಡಿದೆ. ಇದೇ ಮೊದಲ ಬಾರಿಗೆ ಭಾರತವು ಸ್ನೈಪರ್ ರೈಫಲ್ಸ್ಗಳನ್ನು ವಿದೇಶಕ್ಕೆ ರಫ್ತು ಮಾಡಿದೆ ಎಂದು ರಕ್ಷಣಾ ಸಂಸ್ಥೆಯ ಮೂಲಗಳು ತಿಳಿಸಿವೆ. ಸ್ನೈಪರ್ ರೈಫಲ್ ಅನ್ನು ಅದರ ಬ್ಯಾರೆಲ್ ಸೇರಿದಂತೆ ಸಂಪೂರ್ಣವಾಗಿ ವಿನ್ಯಾಸಗೊಳಿಸಲಾಗಿದ್ದು, ಭಾರತದಲ್ಲಿ ತಯಾರಿಸಲಾಗಿದೆ. ಸ್ನೈಪರ್ ರೈಫಲ್ ಅನ್ನು 1,500 ಮೀಟರ್ ಮತ್ತು ಅದಕ್ಕಿಂತ ಹೆಚ್ಚಿನ ಮೀಟರ್ ಗುರಿಗಳನ್ನು ಹೊಡೆಯುವುದಕ್ಕೆ ಪೂರಕವಾಗಿ ವಿನ್ಯಾಸಗೊಳಿಸಲಾಗಿದೆ. ಮಿಗಿಲಾಗಿ ಈ ಖಾಸಗಿ ಸಂಸ್ಥೆಯು ರೈಫಲ್ಗಳ ಜತೆಗೆ ಅನೇಕ ದೇಶಗಳಿಂದ ಸುಮಾರು 50 ಮಿಲಿಯನ್ ಡಾಲರ್ ಮೌಲ್ಯದ ಮದ್ದು ಗುಂಡುಗಳನ್ನು ಪೂರೈಸುವ ಗುತ್ತಿಗೆಗಳನ್ನು ಕೂಡ ಪಡೆದುಕೊಂಡಿದೆ. ಖಾಸಗಿ ಕಂಪನಿಗಳು ತಮ್ಮ ಗ್ರಾಹಕರಿಗಾಗಿ ಹುಡುಕುತ್ತಿದ್ದರೆ, ಭಾರತ ಸರ್ಕಾರವು ಕ್ಷಿಪ್ರವಾಗಿ ಅನುಮತಿಗಳ ಮೂಲಕ ವಹಿವಾಟುಗಳನ್ನು ಗಟ್ಟಿಗೊಳಿಸುತ್ತಿದೆ. ಅಲ್ಲದೆ ವಿದೇಶಗಳಿಂದ ಬರುವ ಬೇಡಿಕೆಗಳನ್ನು ಈ ಕಂಪನಿಗಳಿಗೆ ರವಾನಿಸುತ್ತಿದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ. ಭಾರತದ ವಾರ್ಷಿಕ ರಕ್ಷಣಾ ಉತ್ಪಾದನೆಯು 2023-24ರಲ್ಲಿ ದಾಖಲೆಯ ಗರಿಷ್ಠ 1.27 ಲಕ್ಷ ಕೋಟಿ ರೂಪಾಯಿಗೆ ತಲುಪಿದೆ. ಮೇಕ್ ಇನ್ ಇಂಡಿಯಾ ಯೋಜನೆಯು ಈ ಹೊಸ ಹೊಸ ಮೈಲಿಗಲ್ಲು ತಲುಪಲು ನೆರವಾಗಿದೆ.
![](https://bcsuddi.com/wp-content/uploads/2025/02/WhatsApp-Image-2025-02-05-at-6.18.34-PM.jpeg)