ನವದೆಹಲಿ: ಭಾರತದ ಶ್ರೀಮಂತ ಗೌತಮ್ ಅದಾನಿ ಗ್ರೂಪ್‌ನ ಷೇರುಗಳಿಗೆ ಸಂಬಂಧಿಸಿದಂತೆ ಕಳೆದ ವರ್ಷ ಅಮೆರಿಕ ಮೂಲದ ಶಾರ್ಟ್ ಸೆಲ್ಲರ್ ಕಂಪನಿ ಹಿಂಡೆನ್‌ಬರ್ಗ್ ಬಹಿರಂಗಪಡಿಸಿದ್ದ ವರದಿ ಸಾಕಷ್ಟು ಕೋಲಾಹಲ ಸೃಷ್ಟಿಸಿತ್ತು. ಈ ಬೆನ್ನಲ್ಲೇ ಹಿಂಡನ್‌ಬರ್ಗ್ ಮತ್ತೊಂದು ಸ್ಫೋಟಕ ವರದಿ ಬಹಿರಂಗಪಡಿಸಿದೆ. ಮಾರುಕಟ್ಟೆ ನಿಯಂತ್ರಕ ಸಂಸ್ಥೆ ಸೆಬಿ (SEBI) ಅಧ್ಯಕ್ಷೆ ಮಾಧವಿ ಬುಚ್ ಮತ್ತು ಅವರ ಪತಿ ಅದಾನಿ ಮನಿ ಸೈಫನಿಂಗ್ ಹಗರಣದಲ್ಲಿ ಬಳಸಲಾದ ಆಫ್‌ಶೋರ್ ಫಂಡ್‌ನಲ್ಲಿ ಪಾಲನ್ನು ಹೊಂದಿದ್ದರು ಎಂದು ಹಿಂಡೆನ್‌ಬರ್ಗ್ ಆರೋಪಿಸಿದೆ. ಅಮೆರಿಕಾದ ಶಾರ್ಟ್ ಸೆಲ್ಲರ್ ಸಂಸ್ಥೆಯು ನಿನ್ನೆ (ಆಗಷ್ಟ್ 10ರ) ಪೋಸ್ಟ್‌ನಲ್ಲಿ, ‘ಭಾರತದಲ್ಲಿ ಶೀಘ್ರದಲ್ಲೇ ದೊಡ್ಡದೊಂದು ಸಂಭವಿಸುತ್ತದೆ’ ಎಂದು ಬರೆದುಕೊಂಡಿತ್ತು. ಇದು ದೇಶದಲ್ಲಿ ಭಾರೀ ಆತಂಕಕ್ಕೆ ಎಡೆಮಾಡಿಕೊಟ್ಟಿತ್ತು. ಇದೀಗ ವರದಿ ಬಿಡುಗಡೆ ಮಾಡಿದ್ದು ಅದಾನಿ ಗ್ರೂಪ್ ಮತ್ತು ಸೆಬಿ ಮುಖ್ಯಸ್ಥರ ನಡುವೆ ಸಂಬಂಧವಿದೆ ಎಂದು ಹಿಂಡೆನ್‌ಬರ್ಗ್ ಈ ವರದಿಯಲ್ಲಿ ಹೇಳಿಕೊಂಡಿದೆ. ಅದಾನಿ ಮನಿ ಸೈಫನಿಂಗ್ ಹಗರಣದಲ್ಲಿ ಬಳಸಲಾದ ಕಡಲಾಚೆಯ ಘಟಕಗಳಲ್ಲಿ ಸೆಬಿ ಅಧ್ಯಕ್ಷೆ ಮಾಧಬಿ ಪುರಿ ಬುಚ್ ಪಾಲು ಹೊಂದಿದ್ದಾರೆ ಎಂದು ವಿಸ್ಲ್‌ಬ್ಲೋವರ್‌ನಿಂದ ಪಡೆದ ದಾಖಲೆಗಳು ತೋರಿಸುತ್ತವೆ ಎಂದು ಹಿಂಡೆನ್‌ಬರ್ಗ್ ರಿಸರ್ಚ್ ದೂರಿದೆ. 1996ರಲ್ಲಿ ಮುಂಬೈನಲ್ಲಿ ಜನಿಸಿದ ಮಾಧಬಿ ಪುರಿ ಬುಚ್ ಅವರು, ಗಣಿತ, ಹಣಕಾಸಿನಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದರು. ಹಾಗಾಗಿ ಅವರು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಅಹ್ಮದಾಬಾದ್‌ನಿಂದ ಎಂಬಿಎ ಪಡೆದಿದ್ದಾರೆ. 1989ರಲ್ಲಿ ಅವರು ಐಸಿಐಸಿಐ ಬ್ಯಾಂಕ್ ಸೇರುವ ಮೂಲಕ ಹಣಕಾಸು ಕ್ಷೇತ್ರದಲ್ಲಿ ವೃತ್ತಿ ಆರಂಭಿಸಿದರು. ಬಳಿಕ ಒಂದೊಂದೇ ಹುದ್ದೆಗಳನ್ನು ಏರುತ್ತ, 2009ರಲ್ಲಿ ಐಸಿಐಸಿಐ ಸೆಕ್ಯುರಿಟೀಸ್‌ನ ಎಂಡಿ ಹಾಗೂ ಸಿಇಒ ಆದರು. ಐಸಿಐಸಿಐ ತೊರೆದ ಅವರು ಶಾಂಘೈನಲ್ಲಿರುವ ನ್ಯೂ ಡೆವಲಪ್‌ಮೆಂಟ್ ಬ್ಯಾಂಕ್‌ನ ಕನ್ಸಲ್ಟಂಟ್ ಆಗಿ ನೇಮಕಗೊಂಡರು. ಇದಾದ ಬಳಿಕವೇ ಅವರಿಗೆ ಜಾಗತಿಕ ಷೇರು ಮಾರುಕಟ್ಟೆಯಲ್ಲಿ ಸಂಪರ್ಕ ಬೆಳೆದವು ಎಂದು ಹೇಳಲಾಗುತ್ತಿದೆ. ನಂತರ ಭಾರತಕ್ಕೆ ಬಂದ ಅವರು 2022ರಲ್ಲಿ ಸೆಬಿ ಅಧ್ಯಕ್ಷೆಯಾಗಿಯೂ ನೇಮಕಗೊಂಡರು. ಆ ಮೂಲಕ ಮಾರುಕಟ್ಟೆ ನಿಯಂತ್ರಕ ಸಂಸ್ಥೆಗೆ ಮುಖ್ಯಸ್ಥೆಯಾದ ಮೊದಲ ಮಹಿಳೆ ಎನಿಸಿದರು. ಈಗ ಅವರ ವಿರುದ್ಧವೇ ಹಗರಣದ ಆರೋಪ ಕೇಳಿಬಂದಿದೆ.