ಲಕ್ನೋ : ಅಯೋಧ್ಯೆಯ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್(ಎಂಡಿಎಂ) ಅ.24ರಂದು ತಮ್ಮ ಅಧಿಕೃತ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಸುರ್ಜಿತ್ ಸಿಂಗ್ (58) ಕೊತ್ವಾಲಿ ನಗರದ ಸಿವಿಲ್ ಲೈನ್ಸ್ ಪ್ರದೇಶದ ಸುರ್ಸಾರಿ ಕಾಲೋನಿಯಲ್ಲಿರುವ ತಮ್ಮ ನಿವಾಸದಲ್ಲಿ ನಿಗೂಢವಾಗಿ ಮೃತಪಟ್ಟಿದ್ದಾರೆ. ಸುರ್ಜಿತ್ ಸಿಂಗ್ ಅವರ ಸಾವಿಗೆ ಇನ್ನೂ ಸ್ಪಷ್ಟ ಕಾರಣ ತಿಳಿದುಬಂದಿದ್ದಾರೆ. ಸುರ್ಜಿತ್ ಸಿಂಗ್ ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರು. ಹಾಗಾಗಿ ಮೆದುಳು ರಕ್ತಸ್ರಾವದಿಂದ ಸಾವನ್ನಪ್ಪಿರಬಹುದು ಎಂದು ಶಂಕೆ ವ್ಯಕ್ತಪಡಿಸಲಾಗಿದೆ.
ಘಟನೆಯ ಬಗ್ಗೆ ಮಾಹಿತಿ ಪಡೆದ ಅಯೋಧ್ಯೆ ವಿಭಾಗೀಯ ಆಯುಕ್ತ ಗೌರವ್ ದಯಾಳ್, ಡಿಎಂ ಚಂದ್ರ ವಿಜಯ್ ಸಿಂಗ್, ಸಂಸದ ಅವಧೇಶ್ ಪ್ರಸಾದ್, ಮೇಯರ್ ಗಿರೀಶ್ಪತಿ ತ್ರಿಪಾಠಿ, ಅಯೋಧ್ಯೆ ಎಸ್ಪಿ ಮತ್ತು ಇತರ ಹಿರಿಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಈವರೆಗೆ ಘಟನೆ ಬಗ್ಗೆ ಕುಟುಂಬ ಸದಸ್ಯರು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಮೂಲಗಳ ಪ್ರಕಾರ ಸಿಂಗ್ ಮೃತದೇಹ ಪತ್ತೆಯಾದ ಕೋಣೆಯ ಸುತ್ತ ನೆಲದ ಮೇಲೆ ರಕ್ತ ಕಂಡುಬಂದಿದೆ. ಘಟನಾ ಸ್ಥಳಕ್ಕೆ ವಿಧಿವಿಜ್ಞಾನ ತಂಡವೂ ಆಗಮಿಸಿದೆ. ಅವರ ಸಾವು ಆತ್ಮಹತ್ಯೆಯೋ ಅಥವಾ ಕೊಲೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ತನಿಖೆ ಹಾಗೂ ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಸಾವಿಗೆ ಕಾರಣ ಸ್ಪಷ್ಟವಾಗಲಿದೆ ಎಂದು ಪೊಲೀಸರು ಹೇಳಿದ್ದಾರೆ.