ಮೈಸೂರು: ಸಿದ್ದಾರ್ಥನಗರದಲ್ಲಿರುವ ಅನ್ನದಾನೇಶ್ವರ ಮಠದ 90 ವರ್ಷದ ಶಿವಾನಂದ ಸ್ವಾಮೀಜಿ ಅವರ ಕೊಲೆ ಆಗಿದೆ. ಸ್ವಾಮೀಜಿ ಅವರ ಆಪ್ತಸಹಾಯಕ ರವಿ ಹುಲ್ಲು ಕತ್ತರಿಸುವ ಆಯುಧದಲ್ಲಿ ಸ್ವಾಮೀಜಿ ಕೊಲೆ ಮಾಡಿದ್ದಾರೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ.
ಶಿವಾನಂದ ಸ್ವಾಮೀಜಿಗಳ ಆಪ್ತ ಸಹಾಯಕನಾಗಿದ್ದ ರವಿ ಕುಡಿದ ಮತ್ತಿನಲ್ಲಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಹುಲ್ಲು ಕತ್ತರಿಸುವ ಆಯುಧದಲ್ಲಿ ಸ್ವಾಮೀಜಿ ಕೊಲೆ ಮಾಡಲಾಗಿದೆ. ಸ್ಥಳಕ್ಕೆ ಡಿಸಿಪಿ ಮುತ್ತುರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅನ್ನದಾನೇಶ್ವರ ಮಠವು ಸುಮಾರು 9 ಎಕರೆ ವಿಸ್ತೀರ್ಣದಲ್ಲಿದೆ. ಮೈಸೂರು ರಾಜರು ದಾನವಾಗಿ ನೀಡಿದ್ದ ಈ ಮಠದ ಜಾಗದ ವಿಚಾರವಾಗಿ ಹಲವು ವಿವಾದಗಳಾಗಿದ್ದವು.
ಇನ್ನು ಮತ್ತೊಂದೆಡೆ ಶಿವಾನಂದ ಸ್ವಾಮೀಜಿಯವರು ನಿವೇಶನ ಮಾಡಿ ಸಂಬಂಧಿಕರಿಗೆ ಹಂಚಿದ್ದರು. 2011ರಲ್ಲಿ ಸ್ವಾಮೀಜಿ ವಿರುದ್ದ ಪ್ರಕರಣ ದಾಖಲಾಗಿತ್ತು. ನಿವೇಶನ ನೀಡುವುದಾಗಿ ಹಣ ಪಡೆದು ಮೋಸಕ್ಕೆ ಒಳಗಾಗಿದ್ದ ಪಾಟೀಲ್ ದಂಪತಿ ಸ್ವಾಮೀಜಿಯಿಂದ ವಂಚನೆ, ಲೈಂಗಿಕ ದೌರ್ಜನ್ಯ ಆರೋಪದಡಿ ಪ್ರಕರಣ ದಾಖಲಿಸಿದ್ದರು. ಇದರ ಜೊತೆಗೆ ಬದುಕಿದ್ದಾಗಲೇ ತಮ್ಮ ಗುರುಗಳ ಗದ್ದುಗೆ ಪಕ್ಕದಲ್ಲೇ ಮಠದ ಒಳಭಾಗದಲ್ಲೇ ಶಿವಾನಂದ ಸ್ವಾಮೀಜಿ ಸಮಾಧಿ ಮಾಡಿಕೊಂಡಿದ್ದರು.
				
															
                    
                    
                    
                    
                    
































